ಚಿಕ್ಕಬಳ್ಳಾಪುರ: ಇರಾನ್‌ನ ಪರಮೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿ ಅವರ ಅಂತಿಮ ವಿಧಿವಿಧಾನ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ವಿಶೇಷ ಧಾರ್ಮಿಕ ವಾತಾವರಣ ನಿರ್ಮಾಣವಾಗಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗ್ರಾಮದಿಂದ 20 ರಿಂದ 25 ಮಂದಿ ಈಗಾಗಲೇ ಇರಾನ್‌ಗೆ ತೆರಳಿದ್ದಾರೆ.
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಶಿಯಾ ಮುಸ್ಲಿಂ ಸಮುದಾಯ ವಾಸಿಸುವ ಅಲೀಪುರದಲ್ಲಿ ನೂರಾರು ಜನರು ಅಂತ್ಯಕ್ರಿಯೆಯ ನೇರ ಪ್ರಸಾರ ವೀಕ್ಷಿಸಲು ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ನಡೆಯಲಿರುವ ಕಾರ್ಯಕ್ರಮವನ್ನು ಸಾಮೂಹಿಕವಾಗಿ ವೀಕ್ಷಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.
ಇರಾನ್‌ನಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ವಿಶೇಷ ಪ್ರಾರ್ಥನೆ ಹಾಗೂ ನೇರ ಪ್ರಸಾರದ ವ್ಯವಸ್ಥೆಗಳನ್ನು ಸ್ಥಳೀಯರು ಕೈಗೊಂಡಿದ್ದಾರೆ. ಅಂತ್ಯಕ್ರಿಯೆಯ ನೇರ ಪ್ರಸಾರ ವೀಕ್ಷಿಸಲು ಗ್ರಾಮಸ್ಥರು ಕಾತರದಿಂದ ಕಾಯುತ್ತಿದ್ದಾರೆ.



