HomeKarnataka Newsಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ ವಿತರಣೆಯನ್ನು ತುರ್ತಾಗಿ ಪರಿಶೀಲಿಸಿ ತಡೆಹಿಡಿಯಿರಿ: ಕೇಂದ್ರ ಗೃಹ ಸಚಿವರಿಗೆ ಶೋಭಾ...

ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ ವಿತರಣೆಯನ್ನು ತುರ್ತಾಗಿ ಪರಿಶೀಲಿಸಿ ತಡೆಹಿಡಿಯಿರಿ: ಕೇಂದ್ರ ಗೃಹ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ

For Dai;y Updates Join Our whatsapp Group

ಬೆಂಗಳೂರು: ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ಜಾರಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ತುರ್ತಾಗಿ ಪರಿಶೀಲಿಸುವಂತೆ ಕೋರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ರಾಜ್ಯ ಸರ್ಕಾರ ಹೊರಡಿಸಿರುವ ‘ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ), 2026’ ಅಧಿಸೂಚನೆಯು ಗಂಭೀರ ಸಾಂವಿಧಾನಿಕ, ಕಾನೂನು ಹಾಗೂ ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ಭಾರತದ ಸಂವಿಧಾನವು ದೇಶದ ಎಲ್ಲ ನಾಗರಿಕರಿಗೆ ಏಕರೂಪದ ಪೌರತ್ವವನ್ನು ನೀಡಿದೆ. ಇಂತಹ ಸಂದರ್ಭದಲ್ಲಿ “ಖಾಯಂ ನಿವಾಸಿ” ಎಂಬ ಪ್ರತ್ಯೇಕ ವರ್ಗವನ್ನು ರಾಜ್ಯ ಸರ್ಕಾರ ಸೃಷ್ಟಿಸಲು ಮುಂದಾಗಿರುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ ಈ ವರ್ಗೀಕರಣ ಮಾಡಲಾಗುತ್ತಿದ್ದು, ಇದು ಸಂವಿಧಾನದ 14ನೇ ವಿಧಿಯಲ್ಲಿರುವ ಸಮಾನತೆಯ ತತ್ವಕ್ಕೂ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ, ಪಿಆರ್‌ಸಿ ಪಡೆಯಲು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಮುಖ್ಯವಾಗಿ ಸ್ಥಳೀಯ ಕಂದಾಯ ಅಧಿಕಾರಿಗಳ ಪರಿಶೀಲನೆ ಹಾಗೂ ನಿವಾಸದ ದಾಖಲೆಗಳ ಆಧಾರದ ಮೇಲೆ ಇರುವಂತೆ ಕಾಣುತ್ತಿವೆ. ಆದರೆ, ಕೇಂದ್ರದ ಸಮರ್ಥ ಪ್ರಾಧಿಕಾರಗಳ ಮೂಲಕ ಭಾರತೀಯ ಪೌರತ್ವವನ್ನು ಕಡ್ಡಾಯವಾಗಿ ಪರಿಶೀಲಿಸುವ ವ್ಯವಸ್ಥೆ ಇಲ್ಲದಿರುವುದು ಆತಂಕಕಾರಿ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಇದರ ಪರಿಣಾಮವಾಗಿ ಅಕ್ರಮ ವಲಸಿಗರು ಅಥವಾ ವಿದೇಶಿ ಪ್ರಜೆಗಳು ವಂಚನೆಯ ಮೂಲಕ ಖಾಯಂ ನಿವಾಸಿ ಪ್ರಮಾಣಪತ್ರ ಪಡೆದು, ಸರ್ಕಾರಿ ಸೌಲಭ್ಯಗಳು, ಶಿಕ್ಷಣ, ಉದ್ಯೋಗ ಹಾಗೂ ಇತರೆ ಹಕ್ಕುಗಳನ್ನು ಪಡೆಯುವ ಸಾಧ್ಯತೆ ಇದೆ. ಇದರಿಂದ ಅಕ್ರಮ ವಲಸೆಯನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳಿಗೆ ಧಕ್ಕೆಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

ಪೌರತ್ವ, ವಲಸೆ, ವಿದೇಶಿಯರು ಹಾಗೂ ಆಂತರಿಕ ಭದ್ರತೆ ಸಂಬಂಧಿತ ವಿಷಯಗಳು ಕೇಂದ್ರ ಸರ್ಕಾರದ ವಿಶೇಷ ಅಧಿಕಾರ ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಖಾಯಂ ನಿವಾಸಿ ಸ್ಥಾನಮಾನ ನೀಡುವ ಕ್ರಮವು ಸಾಂವಿಧಾನಿಕ ವ್ಯವಸ್ಥೆಯಲ್ಲೇ ಹಸ್ತಕ್ಷೇಪ ಮಾಡುವಂತಾಗಿದ್ದು, ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ‘ಕರ್ನಾಟಕ ಖಾಯಂ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ), 2026’ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಬೇಕು. ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅಧಿಸೂಚನೆಯ ಅನುಷ್ಠಾನವನ್ನು ತಡೆಹಿಡಿಯುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಜೊತೆಗೆ, ಯಾವ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಅಧಿಕಾರದ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ ಎಂಬ ಬಗ್ಗೆ ರಾಜ್ಯ ಸರ್ಕಾರದಿಂದ ವಿವರವಾದ ವರದಿ ಪಡೆಯಬೇಕು ಎಂದು ಶೋಭಾ ಕರಂದ್ಲಾಜೆ ಪತ್ರದಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img