ಉಡುಪಿ: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಹಲವು ಕಡೆಗಳಲ್ಲಿ ಅನಾಹುತಗಳು ಸಂಭವಿಸುತ್ತಿವೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಬೀಸಿದ ಸುಂಟರಗಾಳಿಗೆ 150ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮವಾಗಿವೆ.
ಬೈಂದೂರು ತಾಲೂಕಿನ ಎಡಮಳ್ಳಿ ಮಕ್ಕಿನ ಮನೆ, ಹಕ್ಕಲುಮನೆ ಹಾಗೂ ಮಕ್ಕಿಮನೆ ಪ್ರದೇಶಗಳಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ ಬೀಸಿದ ಸುಂಟರಗಾಳಿಯ ರಭಸಕ್ಕೆ 15 ರಿಂದ 20 ವರ್ಷಗಳ ಕಾಲ ಬೆಳೆದು ಫಲ ನೀಡುತ್ತಿದ್ದ ಅಡಿಕೆ ಮರಗಳು ಬೇರುಸಹಿತ ಕಿತ್ತುಬಿದ್ದಿವೆ.
ಗಾಳಿಯ ಹೊಡೆತಕ್ಕೆ ಅಡಿಕೆ ಮರಗಳು ಮುರಿದು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಹಲವು ವರ್ಷಗಳ ಶ್ರಮದಿಂದ ಬೆಳೆಸಿದ ಅಡಿಕೆ ತೋಟಗಳು ಹಾನಿಗೊಳಗಾಗಿರುವುದರಿಂದ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.
ಒಂದು ಅಡಿಕೆ ಮರ ಬೆಳೆದು ಫಲ ನೀಡಲು ಸುಮಾರು 5 ರಿಂದ 10 ವರ್ಷಗಳ ಸಮಯ ಬೇಕಾಗುತ್ತದೆ. ಇದೀಗ ಒಂದೇ ದಿನದಲ್ಲಿ ತೋಟ ನಾಶವಾಗಿರುವುದರಿಂದ ರೈತರು ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಇದಲ್ಲದೆ, ಸುಂಟರಗಾಳಿಯ ರಭಸಕ್ಕೆ ಹಲವು ವಿದ್ಯುತ್ ಕಂಬಗಳು ಕೂಡ ಧರೆಗುರುಳಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.



