ವಿಜಯಸಾಕ್ಷಿ ಸುದ್ದಿ, ಗದಗ: ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳು ಸ್ನೇಹ, ಸೇವೆ ಮತ್ತು ಸಮರ್ಪಣೆಯ ಮನೋಭಾವದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಲಯನ್ಸ್ ಜಿಲ್ಲೆ–317ರ ದ್ವಿತೀಯ ಉಪ ಜಿಲ್ಲಾ ಗವರ್ನರ್ ಗವಿಸಿದ್ದಪ್ಪ ಮುದ್ಗಲ್ ಹೇಳಿದರು.
ನಗರದ ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಗುರುವಾರ ನಡೆದ ಗದಗ–ಬೆಟಗೇರಿ ಲಯನ್ಸ್ ಕ್ಲಬ್ ಹಾಗೂ ಲೇಡೀಸ್ ವಿಂಗ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು, ಜನರಿಗೆ ನೇರವಾಗಿ ಉಪಯುಕ್ತವಾಗುವ ಸೇವಾ ಯೋಜನೆಗಳನ್ನು ರೂಪಿಸಿ ಎಲ್ಲ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಲಯನ್ಸ್ ಕ್ಲಬ್ನ ಸೇವಾ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಲಯನ್ಸ್ ಕ್ಲಬ್ ಜಾತಿ, ಧರ್ಮ ಹಾಗೂ ರಾಜಕೀಯ ಭೇದವಿಲ್ಲದೆ ಸಮಾಜಸೇವೆಯನ್ನು ಧ್ಯೇಯವಾಗಿಟ್ಟುಕೊಂಡಿರುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ನಾಯಕತ್ವ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರವೀಣ ವಾರಕರ ಅಧ್ಯಕ್ಷರಾಗಿ, ಡಾ. ನವೀನ ಹಿರೇಗೌಡರ ಹಾಗೂ ರಾಜಣ್ಣ ಮಲ್ಲಾಡದ ಉಪಾಧ್ಯಕ್ಷರಾಗಿ, ಲಿಂಗರಾಜ ತೋಟದ ಕಾರ್ಯದರ್ಶಿಯಾಗಿ, ರೇಣುಕಪ್ರಸಾದ ಹಿರೇಮಠ ಸಹ ಕಾರ್ಯದರ್ಶಿಯಾಗಿ ಹಾಗೂ ರೇಣುಕಪ್ರಸಾದ ಶಿಗ್ಲಿಮಠ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.
ಲೇಡೀಸ್ ವಿಂಗ್ನ ಅಧ್ಯಕ್ಷೆಯಾಗಿ ಅಮೃತಾ ವಾರಕರ, ಕಾರ್ಯದರ್ಶಿಯಾಗಿ ಅರ್ಣಾ ತೋಟದ ಹಾಗೂ ಖಜಾಂಚಿಯಾಗಿ ಪ್ರಿಯಾ ಶಿಗ್ಲಿಮಠ ಪದಗ್ರಹಣ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿಕಟಪೂರ್ವ ಜಿಲ್ಲಾ ಗವರ್ನರ್ ಆನಂದ ಪೋತ್ನೀಸ್, ಕಳೆದ ಸಾಲಿನ ತಂಡ ಕ್ಲಬ್ಗೆ ಆರು ಪ್ರಶಸ್ತಿಗಳನ್ನು ತಂದು ಗೌರವ ಹೆಚ್ಚಿಸಿದ್ದು, ಅದೇ ಉತ್ಸಾಹ ಮತ್ತು ಬದ್ಧತೆಯಿಂದ ನೂತನ ತಂಡವೂ ಕಾರ್ಯನಿರ್ವಹಿಸಬೇಕು ಎಂದು ಹಾರೈಸಿದರು.
ನೂತನ ಅಧ್ಯಕ್ಷ ಪ್ರವೀಣ ವಾರಕರ ಹಾಗೂ ಲೇಡೀಸ್ ವಿಂಗ್ ಅಧ್ಯಕ್ಷೆ ಅಮೃತಾ ವಾರಕರ ತಮ್ಮ ಅಧಿಕಾರಾವಧಿಯ ಸಮಾಜಮುಖಿ ಸೇವಾ ಯೋಜನೆಗಳನ್ನು ವಿವರಿಸಿ ಸದಸ್ಯರ ಸಹಕಾರ ಕೋರಿದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ನೋಟ್ಬುಕ್ಗಳ ವಿತರಣೆ ಹಾಗೂ ಹಿರಿಯ ನಾಗರಿಕರಿಗೆ ವಾಕರ್ಗಳನ್ನು ವಿತರಿಸಲಾಯಿತು.
ನಿಕಟಪೂರ್ವ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಕಳೆದ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಪವರ್ಪಾಯಿಂಟ್ ಮೂಲಕ ಮಂಡಿಸಿದರು. ರಾಜಣ್ಣ ವೇರ್ಣೆಕರ ಸ್ವಾಗತಿಸಿದರು. ಪ್ರಭು ನೀಲಗುಂದ ಕಾರ್ಯಕ್ರಮ ಪರಿಚಯಿಸಿದರು. ಜೆ.ಡಿ. ಉತ್ತರಕರ ನಿರೂಪಿಸಿ, ಲಿಂಗರಾಜ ತೋಟದ ವಂದಿಸಿದರು. ಸಮಾರಂಭದಲ್ಲಿ ಕ್ಲಬ್ನ ಹಿರಿಯ ಹಾಗೂ ಕಿರಿಯ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.



