ವಿಜಯಪುರ: ಭೀಮಾತೀರದ ರೌಡಿಶೀಟರ್ ತುಳಸಿರಾಮನನ್ನು ಗಡಿಪಾರು ಮಾಡಿ ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿಡುವಂತೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಕೆ ಆದೇಶ ಹೊರಡಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜನಾಳ ಗ್ರಾಮದವನಾಗಿರುವ ತುಳಸಿರಾಮ, ಪ್ರಸ್ತುತ ವಿಜಯಪುರದ ಗಣೇಶ್ ನಗರದಲ್ಲಿ ವಾಸವಾಗಿದ್ದ. ಭೀಮಾತೀರದ ಹಂತಕ ಬಾಗಪ್ಪ ಹರಿಜನನ ಆಪ್ತ ಶಿಷ್ಯನಾಗಿದ್ದ ತುಳಸಿರಾಮ, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ.
ತುಳಸಿರಾಮ ಸಮಾಜದ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.
ಅಕ್ರಮ ಸಾರಾಯಿ, ಮಾದಕ ವಸ್ತು, ಜೂಜು ಹಾಗೂ ಇತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಗಳು ಆತನ ಮೇಲಿವೆ. ಅಲ್ಲದೆ, ಭಾರತೀಯ ದಂಡ ಸಂಹಿತೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಹಲವು ಪ್ರಕರಣಗಳು ದಾಖಲಾಗಿವೆ.
ತುಳಸಿ ನಗರದಲ್ಲಿ ನಡೆದ ರವಿ ಮೇಲಿನಕೇರಿ ಹಾಗೂ ಸುಶೀಲ್ ಕಾಳೆ ಹತ್ಯೆ ಪ್ರಕರಣದಲ್ಲಿ ತುಳಸಿರಾಮ ಪ್ರಮುಖ ಆರೋಪಿಯಾಗಿದ್ದ. ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದೀಗ ತುಳಸಿರಾಮನನ್ನು ವಿಜಯಪುರ ಜಿಲ್ಲೆಯಿಂದ ಹೊರಹಾಕಿ, ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲು ಆದೇಶಿಸಲಾಗಿದೆ.



