ಮುಂಬೈ: ‘ರಾಮಾಯಣ’ ಚಿತ್ರದ ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಭಾರೀ ಮಟ್ಟದ ಶಾಲಾ ಪ್ರಚಾರ ಅಭಿಯಾನಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಜುಲೈ 9ರಿಂದ ಆರಂಭವಾದ ಈ ಅಭಿಯಾನವು 18 ನಗರಗಳ 400ಕ್ಕೂ ಹೆಚ್ಚು ಶಾಲೆಗಳನ್ನು ತಲುಪಲಿದ್ದು, ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಮಾಯಣದ ಕಥೆ ಮತ್ತು ಅದರ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವ ಗುರಿ ಹೊಂದಿದೆ.
ಶಾಲಾ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಿರುವ ಈ ಕಾರ್ಯಕ್ರಮದಲ್ಲಿ ರೇಖಾಚಿತ್ರ ಸ್ಪರ್ಧೆ, ಕ್ವಿಜ್, ಸಂವಾದ ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಇದರ ಮೂಲಕ ರಾಮಾಯಣವನ್ನು ಕೇವಲ ಪೌರಾಣಿಕ ಕಥೆಯಾಗಿ ಅಲ್ಲದೆ, ಜೀವನ ಮೌಲ್ಯಗಳನ್ನು ಸಾರುವ ಶಾಶ್ವತ ಕೃತಿಯಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ.
‘ನಮ್ಮ ಸತ್ಯ, ನಮ್ಮ ಇತಿಹಾಸ’ ಎಂಬ ಪರಿಕಲ್ಪನೆಯಡಿ ನಡೆಯುತ್ತಿರುವ ಈ ಅಭಿಯಾನ ಯುವ ಪೀಳಿಗೆಯಲ್ಲಿ ಭಾರತೀಯ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಕುಟುಂಬ ಮಟ್ಟದಲ್ಲೂ ಸಾಂಸ್ಕೃತಿಕ ಸಂವಾದಕ್ಕೆ ವೇದಿಕೆ ಕಲ್ಪಿಸಲಿದೆ ಎಂದು ಚಿತ್ರತಂಡ ಹೇಳಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಮೆಗಾ ಬಜೆಟ್ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ಸನ್ನಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.



