ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಹಣ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಹುಂಡಿ ಹಣದ ಭದ್ರತೆ ಹಾಗೂ ಎಣಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ಸುರಕ್ಷಿತಗೊಳಿಸಲು ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಸರ್ಕಾರದ ಮಾರ್ಗಸೂಚಿಯಂತೆ, ದೇವಾಲಯಗಳಲ್ಲಿ ಹುಂಡಿಗಳನ್ನು ಎಲ್ಲರಿಗೂ ಗೋಚರಿಸುವ ಸುರಕ್ಷಿತ ಸ್ಥಳಗಳಲ್ಲಿ ಅಳವಡಿಸಬೇಕು. ಪ್ರತಿಯೊಂದು ಹುಂಡಿಯೂ ನಾಲ್ಕು ದಿಕ್ಕಿನಿಂದ ಸ್ಪಷ್ಟವಾಗಿ ಗೋಚರಿಸುವಂತೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅದರ ದೃಶ್ಯಾವಳಿಯನ್ನು ಸರ್ವರ್‌ನಲ್ಲಿ ಸಂರಕ್ಷಿಸಬೇಕು. ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದಿಂದ ಈ ಕ್ಯಾಮೆರಾಗಳ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.
ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸುವುದು ಅಥವಾ ಕರ್ಪೂರದ ಹೊಗೆಯಿಂದ ಕ್ಯಾಮೆರಾ ಲೆನ್ಸ್ ಮಸುಕಾಗಿಸಿ ಕಳ್ಳತನ ನಡೆಸುವ ಪ್ರಯತ್ನಗಳನ್ನು ತಡೆಯಲು ವೆಬ್ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಸರ್ವರ್ ಸ್ಥಾಪಿಸಿ, ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳ ಕ್ಯಾಮೆರಾಗಳನ್ನು ಕೇಂದ್ರ ಮಟ್ಟದಲ್ಲೇ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಜಾರಿಗೊಳ್ಳಲಿದೆ.
ಭದ್ರತೆಯ ದೃಷ್ಟಿಯಿಂದ ದೇವಾಲಯಗಳ ಸಿಸಿಟಿವಿ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳೊಂದಿಗೆ ಸಂಪರ್ಕ ಕಲ್ಪಿಸಿ, ಸಂಚಾರ ನಿಯಂತ್ರಣ ಕೊಠಡಿಗಳಲ್ಲಿಯೂ ನೇರ ವೀಕ್ಷಣೆ ಸಾಧ್ಯವಾಗುವಂತೆ ಡ್ಯಾಶ್‌ಬೋರ್ಡ್ ವ್ಯವಸ್ಥೆ ರೂಪಿಸಲಾಗುತ್ತದೆ.
ದೇವಾಲಯಗಳಲ್ಲಿ ಡಿಜಿಟಲ್ ದೇಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹುಂಡಿಗಳಿರುವ ಸ್ಥಳದಲ್ಲೇ ಕ್ಯೂಆರ್ ಕೋಡ್ ಅಳವಡಿಸಲು ಸೂಚಿಸಲಾಗಿದೆ. ಯುಪಿಐ, ಭೀಮ್ ಸೇರಿದಂತೆ ವಿವಿಧ ನಗದುರಹಿತ ಪಾವತಿ ವ್ಯವಸ್ಥೆಗಳ ಮೂಲಕ ಭಕ್ತರು ದೇಣಿಗೆ, ಪ್ರಸಾದ, ಸೇವಾ ಟಿಕೆಟ್ ಸೇರಿದಂತೆ ಇತರ ಸೇವೆಗಳ ಹಣ ಪಾವತಿಸಲು ಅವಕಾಶ ಕಲ್ಪಿಸಬೇಕು. ಕ್ಯೂಆರ್ ಕೋಡ್ ದುರುಪಯೋಗವಾಗದಂತೆ ದೇವಾಲಯದ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ.
ಹುಂಡಿ ಎಣಿಕೆಗೆ ಮುಂಚಿತವಾಗಿ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಎಣಿಕೆ ದಿನಗಳನ್ನು ನಿಗದಿಪಡಿಸಬೇಕು. ಹೆಚ್ಚಿನ ಕಾಣಿಕೆ ಬರುವ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಹಾಗೂ ಸಾಮಾನ್ಯ ದೇವಾಲಯಗಳಲ್ಲಿ ಎರಡು ವಾರಕ್ಕೊಮ್ಮೆ ಕಡ್ಡಾಯವಾಗಿ ಹುಂಡಿ ಎಣಿಕೆ ನಡೆಸಬೇಕು. ಈ ಪ್ರಕ್ರಿಯೆ ತಹಶೀಲ್ದಾರ್ ಅವರ ಮೇಲ್ವಿಚಾರಣೆಯಲ್ಲಿಯೇ ನಡೆಯಬೇಕು.
ಹುಂಡಿ ಎಣಿಕೆ ವೇಳೆ ದೊರೆಯುವ ಚಿನ್ನ, ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಅದೇ ದಿನ ಮೌಲ್ಯಮಾಪನ ಮಾಡಿ ಸಂಬಂಧಿತ ಜಿಲ್ಲಾ ಉಪಖಜಾನೆಗೆ ಜಮಾ ಮಾಡಬೇಕು. ಎಣಿಕೆಯಲ್ಲಿ ಭಾಗವಹಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳ ಹಾಜರಾತಿಯನ್ನು ಫೇಸ್ ರಿಕಗ್ನಿಷನ್ ಮೂಲಕ ದಾಖಲಿಸುವುದರ ಜೊತೆಗೆ, ಎಣಿಕೆ ಸ್ಥಳಕ್ಕೆ ಪ್ರವೇಶಿಸುವ ಮುನ್ನ ತಮ್ಮ ಬಳಿ ಇರುವ ನಗದು ಮೊತ್ತವನ್ನು ಘೋಷಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.
ಹುಂಡಿ ತೆರೆಯುವುದರಿಂದ ಹಿಡಿದು ಹಣವನ್ನು ಬ್ಯಾಂಕ್‌ಗೆ ಹಸ್ತಾಂತರಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಿಸಬೇಕು. ಹುಂಡಿಯಿಂದ ಹಣ ಹೊರತೆಗೆಯುವುದು, ಸಿಬ್ಬಂದಿಗೆ ಹಣ ವಿತರಿಸುವುದು ಹಾಗೂ ಮರುಸ್ವೀಕರಿಸುವ ಹಂತಗಳನ್ನೂ ವಿಡಿಯೋದಲ್ಲಿ ದಾಖಲಿಸಬೇಕು.
ಇನ್ನು ಮುಂದೆ ಹುಂಡಿ ಎಣಿಕೆಗೆ ಸಾರ್ವಜನಿಕರ ಸೇವೆ ಪಡೆಯುವಂತಿಲ್ಲ. ಗೃಹ ರಕ್ಷಕದಳದ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರನ್ನೇ ಈ ಕಾರ್ಯಕ್ಕೆ ನಿಯೋಜಿಸಬೇಕು. ಹುಂಡಿ ಎಣಿಕೆ ಅಥವಾ ಹುಂಡಿಗಳಲ್ಲಿ ಕಳ್ಳತನ ನಡೆದರೆ ಸಂಬಂಧಿತ ದೇವಾಲಯದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುತ್ತದೆ.
ಮಾರ್ಗಸೂಚಿಯ ಭಾಗವಾಗಿ ಸ್ಥಳೀಯ ಪೊಲೀಸರೊಂದಿಗೆ ಸಿಸಿಟಿವಿ ಲೈವ್ ಫೀಡ್ ಏಕೀಕರಣ, ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ, ಅಗ್ನಿ ಸುರಕ್ಷತಾ ಮಾನದಂಡಗಳ ಪಾಲನೆ ಹಾಗೂ ಸಿಸಿಟಿವಿ ವ್ಯವಸ್ಥೆಯ ಕಾರ್ಯನಿರ್ವಹಣೆಯ ನಿಯಮಿತ ಪರಿಶೀಲನೆಗೂ ಆದ್ಯತೆ ನೀಡಲಾಗಿದೆ.
ಸ್ಥಳೀಯ ಕಂದಾಯ, ಪೊಲೀಸ್, ಧಾರ್ಮಿಕ ದತ್ತಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕನಿಷ್ಠ 15 ದಿನಗಳಿಗೊಮ್ಮೆ ಜಂಟಿಯಾಗಿ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರಮುಖ ‘ಎ’ ಮತ್ತು ‘ಬಿ’ ಪ್ರವರ್ಗದ ದೇವಾಲಯಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ಜಂಟಿ ಪರಿಶೀಲನೆ ನಡೆಸಿ ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು.
ಇದಲ್ಲದೆ, ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಅನುಷ್ಠಾನದ ಪ್ರಗತಿ, ಪತ್ತೆಯಾದ ನ್ಯೂನತೆಗಳು, ಕೈಗೊಂಡ ಕ್ರಮಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಕ್ರೋಢೀಕೃತ ಅನುಸರಣಾ ವರದಿಯನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.



