ಮುಂಬೈ: ಬಾಲಿವುಡ್‌ನ ಇಬ್ಬರು ಹಿರಿಯ ನಟರಾದ ಅನುಪಮ್ ಖೇರ್ ಮತ್ತು ನಸೀರುದ್ದೀನ್ ಶಾ ನಡುವಿನ ಹಳೆಯ ರಾಜಕೀಯ ಭಿನ್ನಾಭಿಪ್ರಾಯ ಮತ್ತೆ ಸುದ್ದಿಯಾಗಿದ್ದು, ವೈರಲ್ ಆಗಿರುವ ಆರು ವರ್ಷದ ಹಳೆಯ ವಿಡಿಯೋ ಕುರಿತು ಅನುಪಮ್ ಖೇರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ಉದ್ದೇಶಪೂರ್ವಕ ಅಭಿಯಾನ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ನಸೀರುದ್ದೀನ್ ಶಾ ಈಗ ತಮ್ಮ ಆತ್ಮೀಯ ಸ್ನೇಹಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ನಸೀರುದ್ದೀನ್ ಶಾ ಅನುಪಮ್ ಖೇರ್ ಅವರನ್ನು ‘ಕೋಡಂಗಿ’ ಎಂದು ಕರೆದಿದ್ದ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಮಾತನಾಡಿದ ಅನುಪಮ್, ರಾಮ್ ಮಂದಿರ ದೇಣಿಗೆ ವಿವಾದದ ಬಗ್ಗೆ ತಮ್ಮ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಕೆಲವರು ಹಳೆಯ ವಿಡಿಯೋವನ್ನು ಹುಡುಕಿ ವೈರಲ್ ಮಾಡಿದ್ದಾರೆ ಎಂದು ಕಿಡಿಕಾರಿದರು.
“ಆ ವಿವಾದವನ್ನು ನಾನು ಬಹಳ ಹಿಂದೆಯೇ ಮರೆತಿದ್ದೇನೆ. ನಾನು ಮತ್ತು ನಸೀರುದ್ದೀನ್ ಶಾ ಇತ್ತೀಚೆಗೆ ಭೇಟಿಯಾಗಿ ಪರಸ್ಪರ ಅಪ್ಪಿಕೊಂಡಿದ್ದೇವೆ. 2025ರಲ್ಲೇ ಅವರು ನನ್ನ ಬಳಿ ಬಂದು ಕ್ಷಮೆ ಕೇಳಿದ್ದರು” ಎಂದು ಅನುಪಮ್ ಖೇರ್ ಬಹಿರಂಗಪಡಿಸಿದರು.
ಇದೇ ವೇಳೆ ಅಯೋಧ್ಯೆಯಲ್ಲಿ ನಡೆಯುತ್ತಿರುವ ‘ಶ್ರೀ ರಾಮ್ ಭೂಮಿ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅನುಪಮ್, ರಾಮ್ ಮಂದಿರ ದೇಣಿಗೆ ಪ್ರಕರಣದ ಬಗ್ಗೆ ಮಾತನಾಡಿ, “ಕೆಲವರ ಅಕ್ರಮದಿಂದ ರಾಮ ಮಂದಿರದ ಗೌರವಕ್ಕೆ ಧಕ್ಕೆಯಾಗುವುದಿಲ್ಲ. ಆದರೆ ಹಣ ದುರುಪಯೋಗ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ವೈರಲ್ ವಿಡಿಯೋ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದ ಹಳೆಯ ವಿವಾದಕ್ಕೆ ತೆರೆ ಎಳೆಯುವ ರೀತಿಯಲ್ಲಿ ಅನುಪಮ್ ಖೇರ್ ನೀಡಿರುವ ಈ ಸ್ಪಷ್ಟನೆ ಈಗ ಬಾಲಿವುಡ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



