ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸುತ್ತಿದ್ದಂತೆ ರೋಗಿಗಳು ಭಯಗೊಂಡು ಆಸ್ಪತ್ರೆಯಿಂದ ಹೊರಗೆ ಓಡಿ ಬಂದಿದ್ದಾರೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹೊಗೆ ಕಾಣಿಸುತ್ತಿದ್ದಂತೆಯೇ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಕೆಳ ಮಹಡಿಯಲ್ಲಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಇದರಿಂದ ಕೆಲಕಾಲ ಆಸ್ಪತ್ರೆ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ವೇಳೆ ಆಪರೇಷನ್ ಥಿಯೇಟರ್ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಡೆದಿದ್ದು, ಎರಡು ಗಂಟೆ ಕಳೆದರೂ ತಾಲೂಕು ಆರೋಗ್ಯ ಅಧಿಕಾರಿ (THO) ರವಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.



