ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸರಾಫ್ ಬಜಾರ್‌ನ ಸಹಸ್ರಾರ್ಜುನ ಸಮುದಾಯ ಭವನದಲ್ಲಿ ಎಸ್‌ಎಸ್‌ಎಸ್‌ಕೆ ಶ್ರೀ ಜಗದಂಬಾ ಮಹಿಳಾ ಮಂಡಳದ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಸಂಸ್ಕಾರ ಭಾರತಿ ರಂಗೋಲಿ ತರಬೇತಿ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.
ಜುಲೈ 10ರಿಂದ 12ರವರೆಗೆ ಪ್ರತಿದಿನ ಸಂಜೆ 5ರಿಂದ 8 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸಮಾಜದ ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಎಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕಿ ಶ್ರೀಮತಿ ಸುಮನ್ ಪಾಟೀಲ (ಕುಲಕರ್ಣಿ) ತರಬೇತಿ ನೀಡಿದರು.
ಮೊದಲ ದಿನ ಸಂಸ್ಕಾರ ಭಾರತಿ ರಂಗೋಲಿಯ ಮೂಲಭೂತ ಅಂಶಗಳಾದ ಚುಕ್ಕಿ, ವೃತ್ತ, ಗೋಪಾದ ಹಾಗೂ ತುರಾಯಿ ವಿನ್ಯಾಸಗಳನ್ನು ಪರಿಚಯಿಸಿದರು. ಎರಡನೇ ದಿನ ಸ್ವಸ್ತಿಕ್, ಗಣೇಶ ಹಾಗೂ ಓಂ ವಿನ್ಯಾಸಗಳನ್ನು ಬಿಡಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಮೂರನೇ ದಿನ ಬಣ್ಣಗಳ ಬಳಕೆ, ಬಣ್ಣಗಳ ಸಂಯೋಜನೆ ಹಾಗೂ ಆಕರ್ಷಕ ರಂಗೋಲಿ ವಿನ್ಯಾಸಗಳ ಕುರಿತು ವಿವರವಾಗಿ ತರಬೇತಿ ನೀಡಿದರು.
ಶಿಬಿರದಲ್ಲಿ ಸುಮಾರು 45ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿ ಸಂಸ್ಕಾರ ಭಾರತಿ ರಂಗೋಲಿ ಕಲೆಯ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆದುಕೊಂಡರು.



