ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ತಕ್ಷಶೀಲಾ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಯು-14 ಹಾಗೂ ಯು-19 ಬಾಲಕರ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಾವಂತ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಯು-14 ವಿಭಾಗದಲ್ಲಿ ಅಥರ್ವ ಪ್ರಥಮ ಹಾಗೂ ಮನು ದ್ವಿತೀಯ ಸ್ಥಾನ ಪಡೆದರೆ, ಯು-19 ವಿಭಾಗದಲ್ಲಿ ಆಫ್ರಿದಿ ಪ್ರಥಮ ಹಾಗೂ ಸಂತೋಷ್ ನಾಯಕ್ ದ್ವಿತೀಯ ಸ್ಥಾನ ಪಡೆದು ಟ್ರೋಫಿಗೆ ಭಾಜನರಾದರು.
ಕಾರ್ಯಕ್ರಮದ ರೂವಾರಿ ಹಾಗೂ ಕೋಚ್ ಎಂ. ಸುಲೇಮಾನ್ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ಗುರಿ ಹೊಂದಿದ್ದೇವೆ. ಕ್ರೀಡೆ ಯುವಕರಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಟ್ರೋಫಿ ಪ್ರಾಯೋಜಕ ಶೇಕ್ ಅಹಮದ್ ಮಾತನಾಡಿ, ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರತಿಭಾವಂತರಿಗೆ ಬೆಂಬಲ ಸಿಕ್ಕರೆ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದರು.
ಟೂರ್ನಿಯ ಪ್ರಾಯೋಜಕ ರಾಘವೇಂದ್ರ ಮಾತನಾಡಿ, ಕ್ರೀಡೆ ಕೇವಲ ಸ್ಪರ್ಧೆಯಲ್ಲ, ವ್ಯಕ್ತಿತ್ವ ರೂಪಿಸುವ ಸಾಧನವೂ ಆಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಸಂಚಿ ಶಿವಕುಮಾರ್ ಮಾತನಾಡಿ, ಇಂದಿನ ಯುವಕರು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡುವ ಬದಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಮಾನಸಿಕ ಆರೋಗ್ಯ ವೃದ್ಧಿಸುವುದರ ಜೊತೆಗೆ ಉತ್ತಮ ಜೀವನ ಮೌಲ್ಯಗಳನ್ನು ಕಲಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಯಶಸ್ವಿಯಾಗಲು ಶಿಕ್ಷಕ ಆಂಜನೇಯ, ಕೋಚ್ ಆತಿಫ್, ತಕ್ಷಶೀಲಾ ಬ್ಯಾಡ್ಮಿಂಟನ್ ಕ್ಲಬ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.
“ಗ್ರಾಮೀಣ ಭಾಗದ ಮಕ್ಕಳಲ್ಲೂ ಅಪಾರ ಪ್ರತಿಭೆ ಅಡಗಿದೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದಲೇ ಈ ಟೂರ್ನಿಯನ್ನು ಆಯೋಜಿಸಿದ್ದೇವೆ.”
– ಎಂ. ಸುಲೇಮಾನ್, ಕೋಚ್ ಹಾಗೂ ಟೂರ್ನಿ ಆಯೋಜಕರು



