ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಹರಪನಹಳ್ಳಿ ನೂತನ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು ಹಾಗೂ ಗದಗ–ಸೊಲ್ಲಾಪುರ ಡಬ್ಲಿಂಗ್ ರೈಲು ಮಾರ್ಗದ ಉದ್ಘಾಟನಾ ಸಮಾರಂಭವನ್ನು ಗದಗದಲ್ಲೇ ಆಯೋಜಿಸಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ವಿಕಾಸ ವೇದಿಕೆಯ ಪದಾಧಿಕಾರಿಗಳು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ. ತುಕಾರಾಮ ಅವರಿಗೆ ಮನವಿ ಸಲ್ಲಿಸಿದರು.
ಗದಗ–ಹರಪನಹಳ್ಳಿ ರೈಲು ಮಾರ್ಗದ ಸರ್ವೇಗಾಗಿ ಈಗಾಗಲೇ ₹9 ಲಕ್ಷ ಮಂಜೂರಾಗಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತಂದು ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದರು.
ಗದಗ–ಅಡವಿಸೋಮಾಪುರ–ಡಂಬಳ–ಹೂವಿನಹಡಗಲಿ–ಹರಪನಹಳ್ಳಿ ಮಾರ್ಗವಾಗಿ ಸುಮಾರು 93 ಕಿ.ಮೀ. ಉದ್ದದ ಈ ಹೊಸ ರೈಲು ಮಾರ್ಗ ನಿರ್ಮಾಣವಾದರೆ ವಿಜಯಪುರ, ಬಾಗಲಕೋಟೆ, ಗದಗ ಹಾಗೂ ವಿಜಯನಗರ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಮಾರ್ಗ ನಿರ್ಮಾಣದಿಂದ ಮೈಸೂರು, ಬೆಂಗಳೂರು, ತಿರುಪತಿ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ಹೊಸ ರೈಲುಗಳ ಸಂಚಾರಕ್ಕೂ ಅವಕಾಶ ದೊರೆಯಲಿದ್ದು, ವ್ಯಾಪಾರ, ಶಿಕ್ಷಣ ಹಾಗೂ ಕೃಷಿ ಕ್ಷೇತ್ರಕ್ಕೂ ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಗದಗ–ಸೊಲ್ಲಾಪುರ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಗದಗದಿಂದ ಸೊಲ್ಲಾಪುರ ಮಾರ್ಗವಾಗಿ ಹೊಸ ರೈಲುಗಳನ್ನು ಆರಂಭಿಸುವುದರ ಜೊತೆಗೆ ಉದ್ಘಾಟನಾ ಕಾರ್ಯಕ್ರಮವನ್ನು ಗದಗದಲ್ಲೇ ನಡೆಸಬೇಕು ಎಂದು ವಿಕಾಸ ವೇದಿಕೆ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಈ. ತುಕಾರಾಮ, ಈ ಎಲ್ಲ ಬೇಡಿಕೆಗಳನ್ನು ಕೇಂದ್ರ ರೈಲ್ವೆ ಸಚಿವರು ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು, ಗದಗ–ಹರಪನಹಳ್ಳಿ ರೈಲು ಮಾರ್ಗ ಕಾಮಗಾರಿ ಶೀಘ್ರ ಆರಂಭವಾಗಲು ಮತ್ತು ಡಬ್ಲಿಂಗ್ ಮಾರ್ಗದ ಉದ್ಘಾಟನೆ ಗದಗದಲ್ಲೇ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ, ಜಗದೀಶ ಕಂಗೂರಿ, ವೀರಭದ್ರಪ್ಪ ಕಬ್ಬಿಣದ, ವೆಂಕಟೇಶ ಕಬಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಗದಗ–ಹರಪನಹಳ್ಳಿ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕದ ಜನರ ಬಹುಕಾಲದ ಕನಸು ನನಸಾಗಲಿದೆ. ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕಾಮಗಾರಿ ಶೀಘ್ರ ಆರಂಭಿಸಲು ಪ್ರಯತ್ನಿಸುತ್ತೇವೆ.”
– ಈ. ತುಕಾರಾಮ, ಬಳ್ಳಾರಿ ಲೋಕಸಭಾ ಸದಸ್ಯ



