ಚಾಮರಾಜನಗರ: ರಸ್ತೆ ಕಾಮಗಾರಿಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ಗುಣಮಟ್ಟ ಪರಿಶೀಲನೆ ನಡೆಸದೇ ಬಿಲ್ ಪಾವತಿಸಿರುವುದು ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಅಮಾನತುಗೊಂಡ ಅಧಿಕಾರಿಗಳಲ್ಲಿ ಹಿಂದಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಪುರುಷೋತ್ತಮ (ಪ್ರಸ್ತುತ ಆನೇಕಲ್ ಉಪ ವಿಭಾಗ) ಹಾಗೂ ಕೊಳ್ಳೇಗಾಲ ಉಪ ವಿಭಾಗದ ಪ್ರಸ್ತುತ ಎಇಇ ಎನ್. ಸುರೇಂದ್ರ ಕುಮಾರ್ ಸೇರಿದ್ದಾರೆ.
ಹನೂರು ತಾಲೂಕಿನ ಕೊರಮನಕತ್ರಿ–ಟಿಬೇಟಿಯನ್ ಸೆಟಲ್ಮೆಂಟ್ ಮಾರ್ಗದ 4.20 ಕಿಲೋಮೀಟರ್ ರಸ್ತೆ ಕಾಮಗಾರಿ ವೇಳೆ ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತನಿಖೆಯ ಪ್ರಕಾರ, ಪೂರ್ವಾನುಮೋದನೆ ಪಡೆಯದೇ ಟೆಂಡರ್ ಆಹ್ವಾನಿಸಿ ಅನುಮೋದನೆ ನೀಡಲಾಗಿದೆ. ಕಾಮಗಾರಿಯ ಗುಣಮಟ್ಟ ಪರೀಕ್ಷೆ ನಡೆಸಿಲ್ಲ. ಅಳತೆ ಪುಸ್ತಕದಲ್ಲಿನ ವಿವರಗಳು ಮತ್ತು ನೈಜ ಕಾಮಗಾರಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಎಲ್ಲ ಲೋಪಗಳ ನಡುವೆಯೂ ಚಾಲ್ತಿ ಬಿಲ್ ಮೂಲಕ 88.83 ಲಕ್ಷ ರೂಪಾಯಿ ಪಾವತಿಸಲಾಗಿದೆ.
ಈ ಅಕ್ರಮಗಳಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಕರ್ತವ್ಯ ಲೋಪ ಮತ್ತು ಟೆಂಡರ್ ನಿಯಮ ಉಲ್ಲಂಘನೆ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ಮಟ್ಟದಲ್ಲಿ ಮುಂದಿನ ತನಿಖೆಯೂ ಮುಂದುವರಿದಿದೆ.



