ಗದಗ: ತಾಲೂಕಿನ ಹೊಸೂರು ಗ್ರಾಮದಲ್ಲಿ ಸ್ಮಶಾನ ಭೂಮಿಯ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಮೃತ ಮಹಿಳೆಯ ಅಂತ್ಯಕ್ರಿಯೆಗೆ ಸ್ಥಳ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಇಳಿದ ಘಟನೆ ಬುಧವಾರ ನಡೆದಿದೆ.
ಗ್ರಾಮದ ಬಸವಣ್ಣೆಮ್ಮ ಬೋಳನವರ್ (51) ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ ಗ್ರಾಮದಲ್ಲಿ ಅಧಿಕೃತ ಸ್ಮಶಾನ ಜಾಗ ಇಲ್ಲದ ಕಾರಣ, ಮೃತದೇಹವನ್ನು ಬಸ್ ನಿಲ್ದಾಣದ ಸಮೀಪವೇ ಚಿತೆಗೆ ಸಜ್ಜುಗೊಳಿಸಲು ಗ್ರಾಮಸ್ಥರು ಮುಂದಾದರು.
ಇಲ್ಲಿಯವರೆಗೆ ಗ್ರಾಮದ ಯಾರೇ ಮೃತಪಟ್ಟರೂ ಬಶೆಟ್ಟಿ ಎಂಬುವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಯುತ್ತಿತ್ತು. ಆದರೆ ಈಗ ಜಮೀನಿನ ಮಾಲೀಕ ಚಂದ್ರು ಬಶೆಟ್ಟಿ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ವಿರೋಧ ವ್ಯಕ್ತಪಡಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, “ಗ್ರಾಮದಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತೇವೆ” ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿಯುತ್ತಿದ್ದಂತೆ ಸಹಾಯಕ ಆಯುಕ್ತ ಗಂಗಪ್ಪ, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಅಧಿಕಾರಿಗಳು ಮತ್ತು ಪೊಲೀಸರು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರು.
ಘಟನೆ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.



