ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಕುಂದ್ರಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಮೂಲಸೌಲಭ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಅಡಿಯಲ್ಲಿ ₹80 ಲಕ್ಷ ವೆಚ್ಚದಲ್ಲಿ ಅಡರಕಟ್ಟಿ–ಕುಂದ್ರಳ್ಳಿ–ನಾದಿಗಟ್ಟಿ ಜಿಲ್ಲಾ ಮುಖ್ಯ ರಸ್ತೆಯ ಆಯ್ದ ಭಾಗದಲ್ಲಿ ನಿರ್ಮಾಣವಾಗಲಿರುವ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆ ಬಳಿಕ ಮಾತನಾಡಿದ ಅವರು, ಶಾಸಕನಾದ ಬಳಿಕ ತಾಲೂಕಿನ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಲು ವಿವಿಧ ಯೋಜನೆಗಳಡಿ ಅನುದಾನ ತಂದು ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ವಿರೋಧ ಪಕ್ಷದ ಸರ್ಕಾರವಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊರತೆಯಾಗದಂತೆ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ಬಟ್ಟೂರ–ಕುಂದ್ರಳ್ಳಿ ಸಂಪರ್ಕ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು, ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಇದೀಗ ಸ್ಪಂದಿಸಲಾಗಿದೆ. ಅಡರಕಟ್ಟಿ–ಕುಂದ್ರಳ್ಳಿ–ನಾದಿಗಟ್ಟಿ ಜಿಲ್ಲಾ ಮುಖ್ಯ ರಸ್ತೆಯು ಗದಗ, ಹೊಸಪೇಟೆ ಸೇರಿದಂತೆ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಕ್ಷೇತ್ರದ ಹಲವು ರಸ್ತೆಗಳು ಇನ್ನೂ ಅಭಿವೃದ್ಧಿ ನಿರೀಕ್ಷೆಯಲ್ಲಿದ್ದು, ಹಿಂದುಳಿದ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ಕಳಸದ, ಉಪಾಧ್ಯಕ್ಷೆ ಮಲ್ಲವ್ವ ತಳವಾರ, ಮಂಜುನಾಥ ಗೌರಿ, ಮಂಜಪ್ಪ ಕಳಸದ, ಗಂಗಾಧರ ಮೆಣಸಿನಕಾಯಿ, ಕಲ್ಲಪ್ಪ ಹಡಪದ, ಶಂಕರ ಲಮಾಣಿ, ಈಶ್ವರ ಲಮಾಣಿ, ರುದ್ರಯ್ಯ ಶಿಲವಂತಮಠ, ಸುರೇಶ ಲಮಾಣಿ, ಬಸವರಾಜ ಲಮಾಣಿ, ಬಸನಗೌಡ ಪಾಟೀಲ, ಹಾಲಪ್ಪ ಹಂಗನಕಟ್ಟಿ, ಅಭಿವೃದ್ಧಿ ಅಧಿಕಾರಿ ಹನಮಂತಪ್ಪ ಲಮಾಣಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಲ್ಲಿಕಾರ್ಜುನ ಮೇತ್ರಿ, ಗುತ್ತಿಗೆದಾರ ರಾಜು ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ. ಹಿಂದುಳಿದ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಸರ್ಕಾರ ಇನ್ನಷ್ಟು ವಿಶೇಷ ಅನುದಾನ ನೀಡಬೇಕು.”
– ಡಾ. ಚಂದ್ರು ಲಮಾಣಿ, ಶಾಸಕ



