ಮಂಗಳೂರು: ಬಂಟ್ವಾಳದ ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರಲ್ಲೇ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, 24 ಗಂಟೆಗಳೊಳಗೆ ಪ್ರಮುಖ ಆರೋಪಿ ಚೇತನ್ನನ್ನು ಬಂಧಿಸಿದ್ದಾರೆ.
ಕಕ್ಯಪದವು ನಿವಾಸಿ ಹಾಗೂ ಖಾಸಗಿ ನರ್ಸಿಂಗ್ ಹೋಂ ಸಿಬ್ಬಂದಿಯಾಗಿದ್ದ ಲಾವಣ್ಯ, ಗುರುವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಸರ್ಕಾರಿ ಬಸ್ನಲ್ಲಿ ಕುಳಿತಿದ್ದರು. ಇದೇ ವೇಳೆ ಬಸ್ಗೆ ನುಗ್ಗಿದ ಆರೋಪಿ ಚೇತನ್, ಅವರನ್ನು ಬಲವಂತವಾಗಿ ಹೊರಗೆ ಎಳೆದು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾವಣ್ಯ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಘಟನೆಯ ನಂತರ ಪರಾರಿಯಾಗಿದ್ದ ಚೇತನ್ಗಾಗಿ ಪೊಲೀಸರು ವಿಶೇಷ ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ, ಚೇತನ್ ಮೃತೆಯ ಸಂಬಂಧಿಯಾಗಿದ್ದು, ಪ್ರೀತಿ ನಿರಾಕರಣೆಯ ಹಿನ್ನೆಲೆಯಲ್ಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಎಲ್ಲ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಹತ್ಯೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಇದೇ ವೇಳೆ, ಆರೋಪಿ ಚೇತನ್ ಭಜರಂಗದಳದ ಸದಸ್ಯ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ಕುರಿತು ಭಜರಂಗದಳ ಸ್ಪಷ್ಟನೆ ನೀಡಿದ್ದು, ಅದು ಎಡಿಟ್ ಮಾಡಲಾದ ನಕಲಿ ಚಿತ್ರ ಎಂದು ತಿಳಿಸಿದೆ.



