ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ವಿರುದ್ಧ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ-ಜೆಡಿಎಸ್ ನಡೆಸುತ್ತಿರುವುದು ಪಾದಯಾತ್ರೆಯಲ್ಲ, ಅದು ಪ್ರಾಯಶ್ಚಿತ್ತ ಯಾತ್ರೆ ಎಂದು ಟೀಕಿಸಿದ ಅವರು, ಈ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಈ ವಿಚಾರದಲ್ಲಿ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು. “ಕುಮಾರಸ್ವಾಮಿ ಅವರೇ ಈ ಯೋಜನೆಗೆ ಚಾಲನೆ ನೀಡಿದವರು. ಈಗ ರೈತರ ಪರ ಹೋರಾಟ ಮಾಡುತ್ತಿರುವಂತೆ ನಾಟಕ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಡಿಎಲ್‌ಎಫ್ ಸಂಸ್ಥೆಗೆ ಜಾಗತಿಕ ಟೆಂಡರ್ ನೀಡುವ ಸಂದರ್ಭದಲ್ಲಿ ಎಷ್ಟು ಕಿಕ್‌ಬ್ಯಾಕ್ ಪಡೆದಿದ್ದೀರಿ? ನಂತರ ಟೆಂಡರ್ ಹಿಂಪಡೆಯುವಾಗಲೂ ಎಷ್ಟು ಹಣ ಪಡೆದಿದ್ದೀರಿ ಎಂಬುದನ್ನು ಕುಮಾರಸ್ವಾಮಿ ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದು ಅವರು ಸವಾಲು ಹಾಕಿದರು.
ಬಿಜೆಪಿ ನಾಯಕರ ಮೇಲೂ ವಾಗ್ದಾಳಿ ನಡೆಸಿದ ಬಾಲಕೃಷ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಮಾಜಿ ಸಚಿವ ಜಗದೀಶ್ ಶೆಟ್ಟರ್ ಕೂಡ ಇದೇ ಯೋಜನೆಗೆ ಬೆಂಬಲ ನೀಡಿದ್ದರು ಎಂದು ಆರೋಪಿಸಿದರು. “2014ರಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಹೊಸ ನಿರ್ಧಾರ ಕೈಗೊಂಡಿರಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಯೋಜನೆಗೆ ವೇಗ ಸಿಕ್ಕಿತ್ತು” ಎಂದು ಹೇಳಿದರು.
ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧವೂ ತೀವ್ರ ಟೀಕೆ ವ್ಯಕ್ತಪಡಿಸಿದ ಅವರು, “ಅಂದು ನೀವು ಕಂದಾಯ ಸಚಿವರಾಗಿದ್ದಿರಿ. ಆಗ ಈ ಯೋಜನೆ ಬಗ್ಗೆ ಜ್ಞಾನ ಇರಲಿಲ್ಲವೇ? ಈಗ ರೈತರ ಪರ ಮಾತನಾಡುವುದರಿಂದ ಸತ್ಯ ಬದಲಾಗುವುದಿಲ್ಲ” ಎಂದು ಪ್ರಶ್ನಿಸಿದರು.
ಇದೇ ವೇಳೆ, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿರುವ ಸುಮಾರು 36 ಎಕರೆ ಜಮೀನು ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಗೆ ಬಂದಿರುವ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಆ ಜಮೀನು ಖರೀದಿ ಹಾಗೂ ಮಂಜೂರಾತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಎತ್ತಿದರು. ಎಸ್‌ಸಿ/ಎಸ್‌ಟಿ ಜಮೀನು ವರ್ಗಾವಣೆ, ಪಿಟಿಸಿಎಲ್ ಕಾಯ್ದೆ ಹಾಗೂ ಭೂ ದಾಖಲೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಬದಲು, ಈ ಯೋಜನೆಗೆ ಸಂಬಂಧಿಸಿದ ಹಿಂದಿನ ನಿರ್ಧಾರಗಳು ಹಾಗೂ ತಮ್ಮ ಪಾತ್ರದ ಬಗ್ಗೆ ಬಿಜೆಪಿ-ಜೆಡಿಎಸ್ ನಾಯಕರು ಮೊದಲು ಜನರಿಗೆ ಉತ್ತರ ನೀಡಬೇಕು ಎಂದು ಹೆಚ್.ಸಿ. ಬಾಲಕೃಷ್ಣ ಒತ್ತಾಯಿಸಿದರು.

