ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಇಡೀ ದೇಶದ ಮತದಾರರ ಪಟ್ಟಿಯನ್ನು ಮರು ತಯಾರಿಸುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಗಡಿಬಿಡಿ ಹಾಗೂ ಗೊಂದಲಮಯ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಆರೋಪಿಸಿದರು.
ತಾಲೂಕಿನ ಕೃಷಿಕ ಸಮಾಜದ ಕಚೇರಿಯಲ್ಲಿ ಜಿಲ್ಲಾ ಮತಗಟ್ಟೆ ಕಾವಲು ಸಮಿತಿಯಿಂದ ರೂಪಿಸಲಾದ ಎಸ್ಐಆರ್ ಮಾಹಿತಿ ವೆಬ್ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.
“ಚುನಾವಣಾ ಆಯೋಗ ತಾನು ಹೇಳಿದ್ದೇ ಅಂತಿಮ ಎಂಬ ಧೋರಣೆಯಲ್ಲಿ ಈ ಪ್ರಕ್ರಿಯೆಯನ್ನು ನಡೆಸುತ್ತಿದೆ. ಇದರ ಹಿಂದಿನ ಉದ್ದೇಶಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಆ ಚರ್ಚೆಗೆ ನಾವು ಹೋಗುವುದಿಲ್ಲ. ಕಳ್ಳ ಮತಗಳನ್ನು ಪತ್ತೆಹಚ್ಚಬೇಕಾದರೆ, ಅದರ ಬದಲು ಸಾಮಾನ್ಯ ಮತದಾರರನ್ನೇ ಅನುಮಾನಿಸಿ ವಿಚಾರಣೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ” ಎಂದು ಹೇಳಿದರು.
ಜಿಲ್ಲಾ ಮತಗಟ್ಟೆ ಕಾವಲು ಸಮಿತಿಯ ಸಂಚಾಲಕ ಹಾಗೂ ಸಮಾಜ ಸೇವಕ ತಿಪ್ಪೇಸ್ವಾಮಿ ವೆಂಕಟೇಶ್ ಮಾತನಾಡಿ, “ನಾಡಿನ ಮತ ನಮ್ಮೆಲ್ಲರ ಹೊಣೆ” ಎಂಬ ಉದ್ದೇಶದಿಂದ ಈ ವೆಬ್ಸೈಟ್ ಆರಂಭಿಸಲಾಗಿದೆ. ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಹಾಗೂ ಮತದಾನದ ಹಕ್ಕು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ವೆಬ್ಸೈಟ್ ನೆರವಾಗಲಿದೆ ಎಂದು ತಿಳಿಸಿದರು.
ರೈತ ಸಂಘದ ಉಪಾಧ್ಯಕ್ಷ ತಂಬ್ರಹಳ್ಳಿ ರವಿಕುಮಾರ್ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಹಾಗೂ ಅದರ ಪರಿಣಾಮಗಳ ಕುರಿತು ನಿರಂತರ ಜನಜಾಗೃತಿ ಮೂಡಿಸಬೇಕಿದೆ. ಜನಮಾಧ್ಯಮಗಳ ಮೂಲಕ ಗೊಂದಲ ನಿವಾರಣೆ ಮಾಡುವುದು ಹಾಗೂ ಜನಸಾಂಸ್ಕೃತಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹುರ್ಕಡ್ಲಿ ಶಿವಕುಮಾರ್, ಯು. ಮಂಜುನಾಥ, ಕೆ. ರೋಶನ್, ಹನುಮೇಶ್ ರಾವ್, ಎ.ಬಿ. ಕೊಟ್ರೇಶ್, ಬಂಗಿ ಕರಿಬಸಪ್ಪ, ಹತ್ತಿ ಪ್ರಶಾಂತ್, ವಿ. ನಜೀರ್, ರಾಮರಾಜ್, ಅನಂತು, ಗಣೇಶಪ್ಪ, ಶ್ರೀಮತಿ ಪುಷ್ಪಾವತಿ, ರಾಜಭಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



