ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.32.04ರಷ್ಟು ಮಳೆಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ನರಗುಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಅಭಾವದಿಂದ ಹಾನಿಗೊಳಗಾಗುತ್ತಿರುವ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು.
ನರಗುಂದ ತಾಲೂಕಿನ ಕಲಕೇರಿ ಹಾಗೂ ಹದಲಿ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿದ ಅವರು, ಹೆಸರು, ಉದ್ದು, ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಹಾಗೂ ಹತ್ತಿ ಬೆಳೆಗಳು ಒಣಗಿ ಬಾಡುತ್ತಿರುವ ಪರಿಸ್ಥಿತಿಯನ್ನು ವೀಕ್ಷಿಸಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದರು. ಮಳೆ ಕೊರತೆಯಿಂದ ಎದುರಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ರೈತರಿಗೆ ಧೈರ್ಯ ತುಂಬಿದರು.
ಜಿಲ್ಲೆಯಲ್ಲಿ ಬೆಳೆದ ಬೆಳೆಗಳ ನಿಖರ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಲು ರೈತರು ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇ ವೇಳೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಸಾಲ ಪಡೆದ ರೈತರು ಹೆಸರು (ಮಳೆಆಶ್ರಿತ) ಹಾಗೂ ಹತ್ತಿ (ಮಳೆಆಶ್ರಿತ ಮತ್ತು ನೀರಾವರಿ) ಬೆಳೆಗಳಿಗೆ ಜುಲೈ 22ರವರೆಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪರಿಶೀಲನಾ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ಸಿಬ್ಬಂದಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
ಮುಂಗಾರು ಪ್ರಗತಿ
- ಮುಂಗಾರು ಬಿತ್ತನೆ ಗುರಿ: 3,13,719 ಹೆಕ್ಟೇರ್
- ಇದುವರೆಗೆ ಬಿತ್ತನೆ: 2,57,401 ಹೆಕ್ಟೇರ್
- ಜೂನ್ 1ರಿಂದ ಜುಲೈ 16ರವರೆಗಿನ ವಾಡಿಕೆ ಮಳೆ: 121.4 ಮಿ.ಮೀ.
- ದಾಖಲಾದ ವಾಸ್ತವಿಕ ಮಳೆ: 82.50 ಮಿ.ಮೀ.
- ಮಳೆ ಕೊರತೆ: ಶೇ.32.04



