ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಆಧಾರಸ್ತಂಭಗಳಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪಷ್ಟ ಗುರಿ ಹೊಂದಿ ಅದನ್ನು ಸಾಧಿಸಲು ನಿರಂತರ ಪರಿಶ್ರಮ ಪಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಆಂಗ್ಲೋ ಉರ್ದು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಮತದಾರರ ಸಾಕ್ಷರತಾ ಸಂಘಗಳ ಉದ್ಘಾಟನೆ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾದರಿಯಾಗಿದ್ದು, ತಾಳ್ಮೆ, ಸತತ ಪರಿಶ್ರಮ, ಸಂಸ್ಕಾರ ಹಾಗೂ ದೃಢ ಇಚ್ಛಾಶಕ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಅಚಲವಾದ ನಂಬಿಕೆಯೊಂದಿಗೆ ಸಾಗಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಸರ್ಫರಾಜ್ ಅಹ್ಮದ್ ಎಸ್. ಉಮಚಿಗಿ ಮಾತನಾಡಿ, ವಿದ್ಯಾರ್ಥಿಗಳು ಭಾಷೆಯನ್ನು ಪ್ರೀತಿಸಿ ಅದರ ಮೇಲೆ ಪಾಂಡಿತ್ಯ ಬೆಳೆಸಿಕೊಳ್ಳಬೇಕು. ಗುಣ-ಅವಗುಣಗಳನ್ನು ಅರಿತು ಅವಗುಣಗಳನ್ನು ತೊರೆದು ಉತ್ತಮ ನಡೆ-ನುಡಿ, ಆಚಾರ-ವಿಚಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕ ಪರಿಶ್ರಮದಿಂದ ಉತ್ತಮ ಅಂಕ ಗಳಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಪ್ರೊ. ಎ.ಎಂ. ಮುಲ್ಲಾ ಮಾತನಾಡಿ, ಜೀವನ ಕೇವಲ ಬದುಕುವುದಕ್ಕಲ್ಲ, ಸಾಧನೆ ಮಾಡುವುದಕ್ಕಾಗಿದೆ. ವಿದ್ಯಾರ್ಥಿಗಳು ಗೌರವ, ಪ್ರೀತಿ, ಸ್ವ-ನಿಯಂತ್ರಣ, ನಂಬಿಕೆ, ಏಕಾಗ್ರತೆ, ಸತ್ಯ ಹಾಗೂ ದೃಢ ನಿರ್ಧಾರದಂತಹ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮವು ಕು. ಸನಾ ನದಾಫ ಅವರ ಕುರಾನ್ ಪಠಣದೊಂದಿಗೆ ಆರಂಭವಾಯಿತು. ಕು. ಫಾತಿಮಾ ಗುಳಗುಂದಿ ಹಮ್ದ್ ಹಾಡಿದರೆ, ಕು. ಆಫ್ರೀನ್ ಸಂಕಲಪುರ ಸಾಥ್ ನೀಡಿದರು. ಕು. ಕವಿತಾ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಐ.ಪಿ. ಹಾದಿಮನಿ ಸ್ವಾಗತಿಸಿದರು. ಎಂ.ಎಂ. ಶಿರಹಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಎಸ್.ಎ. ಬಾರೂದವಾಲೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಎಸ್.ಎಸ್. ಪಾಟೀಲ ವಂದಿಸಿದರು. ಕು. ಮಾರಿಯಾ ಕಿಫ್ತೆ ಎಸ್. ಮಿರ್ಜಿ ಹಾಗೂ ಕು. ಸಮೀನಾ ಆರ್. ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಜಿ ಎ.ಎಂ. ಸೌದಾಗರ, ಸದಸ್ಯರಾದ ಜನಾಬ್ ಶಾಹನವಾಜ್ ಎಸ್. ಉಮಚಗಿ, ಹಾಜಿ ರಾಜೇಸಾಬ ಬಾಗಲಕೋಟ, ಜನಾಬ್ ಜೆ.ಬಿ. ಉಮಚಗಿ, ಹಾಜಿ ಎಂ.ಎ. ಹಣಗಿ, ಜನಾಬ್ ಎಸ್.ಎ. ಬಿಜಾಪೂರ ಹಾಗೂ ಅತಿಥಿಯಾಗಿ ಜನಾಬ್ ಶಾಮಾಜ್ ಎಸ್. ಉಮಚಗಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
“ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ತಾಳ್ಮೆ, ಪರಿಶ್ರಮ ಮತ್ತು ದೃಢ ಇಚ್ಛಾಶಕ್ತಿಯೇ ಯಶಸ್ಸಿನ ಗುಟ್ಟು.”
– ಎಸ್.ವಿ. ಸಂಕನೂರ, ವಿಧಾನಪರಿಷತ್ ಸದಸ್ಯ



