ಗದಗ: ರಾಜ್ಯ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸಿ ಹನಿ ನೀರಾವರಿ ಯೋಜನೆಯ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಾಗೂ ನರಸಾಪುರ–ನಾಗಸಮುದ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸುಮಾರು 220 ಎಕರೆ ಫಲವತ್ತಾದ ಕೃಷಿಭೂಮಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ್ರ ಬಣ), ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಭಕ್ತರು ಶನಿವಾರ ದಂಡಿನ ದುರ್ಗಾದೇವಿ ದೇವಸ್ಥಾನದ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ್ರ ಬಣ) ಜಿಲ್ಲಾ ಅಧ್ಯಕ್ಷ ಎಂ.ಪಿ. ಪರ್ವತಗೌಡ್ರ, ಹನಿ ನೀರಾವರಿ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಕಾನೂನು ಉಲ್ಲಂಘಿಸಿ, ರಾಜ್ಯ ಹೆದ್ದಾರಿ ಸುರಕ್ಷತಾ ನಿಯಮಗಳನ್ನು ಕಡೆಗಣಿಸಿ ಕಾಮಗಾರಿ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಅಧೀನದ ಇಂಡಿಯನ್ ರೋಡ್ ಕಾಂಗ್ರೆಸ್ (IRC) ವಿಶೇಷ ಪ್ರಕಟಣೆ-15ರ ಪ್ರಕಾರ ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ ಎರಡೂ ಬದಿಗೆ 40 ಮೀಟರ್ ವ್ಯಾಪ್ತಿಯ ಪ್ರದೇಶ ನಿಷೇಧಿತ ವಲಯವಾಗಿದೆ. ಈ ವ್ಯಾಪ್ತಿಯಲ್ಲಿ ಯಾವುದೇ ಶಾಶ್ವತ ಕಾಮಗಾರಿ ಕೈಗೊಳ್ಳಬಾರದು ಎಂಬ ನಿಯಮವಿದ್ದರೂ, ಗದಗ ತಾಲೂಕಿನ ನಾಗಸಮುದ್ರ–ಹಿರೇಕೊಪ್ಪ ಸರಹದ್ದಿನ ಕಾರವಾರ–ಕೈಗಾ–ಇಳಕಲ್ ರಾಜ್ಯ ಹೆದ್ದಾರಿ-06ರ ಪಕ್ಕದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಗುಂಡಿ ತೋಡಿ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿರುವುದು ಕಾನೂನುಬಾಹಿರವಾಗಿದ್ದು, ಕೂಡಲೇ ಅನುಮತಿ ರದ್ದುಪಡಿಸಿ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ರಸ್ತೆ ಅಗಲೀಕರಣವಾದರೆ ಈ ಪೈಪ್‌ಲೈನ್ ರಸ್ತೆ ಮಧ್ಯಭಾಗಕ್ಕೆ ಬರುವ ಸಾಧ್ಯತೆ ಇದೆ. ನಮಗೆ ನೀರಾವರಿ ಯೋಜನೆ ಬೇಕು, ಆದರೆ ತಾತ್ಕಾಲಿಕವಲ್ಲ; ಶಾಶ್ವತ ಮತ್ತು ಕಾನೂನುಬದ್ಧ ಯೋಜನೆ ಬೇಕು ಎಂದು ಅವರು ಹೇಳಿದರು.
ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಪಕ್ಕದಲ್ಲೇ 20 ಅಡಿಗೂ ಹೆಚ್ಚು ಆಳದಲ್ಲಿ ಪೈಪ್‌ಲೈನ್ ಅಳವಡಿಸಲು ಗುಂಡಿ ತೋಡುತ್ತಿರುವುದರಿಂದ ದೇವಸ್ಥಾನ ಹಾಗೂ ಅರಣ್ಯ ಇಲಾಖೆಯ ದಾಖಲೆಯಲ್ಲಿರುವ 150ರಿಂದ 160 ವರ್ಷ ಹಳೆಯ ಬೇವಿನ ಮರಕ್ಕೆ ಹಾನಿಯಾಗುವ ಆತಂಕವಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ದೇವಸ್ಥಾನದಿಂದ ಸುಮಾರು 300 ಮೀಟರ್ ದೂರದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸಯ್ಯ ಗುಡ್ಡಿಮಠ ಮಾತನಾಡಿ, ಬೆಟಗೇರಿ ಹೊರವಲಯದ ನರಸಾಪುರ ಮತ್ತು ನಾಗಸಮುದ್ರ ವ್ಯಾಪ್ತಿಯಲ್ಲಿ ಸುಮಾರು 220 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ರೈತರ ಫಲವತ್ತಾದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಅಗತ್ಯವಿದ್ದರೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರುಜಿ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಗುರ್ಲಾಪುರ ಹೋರಾಟದ ಮಾದರಿಯಲ್ಲಿ ಮತ್ತೊಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿಂದೂ ಮುಖಂಡ ರಾಜು ಖಾನಪ್ಪನವರ ಮಾತನಾಡಿ, ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು. ಆದರೆ ಅದರ ಹೆಸರಿನಲ್ಲಿ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನ ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಕಾಮಗಾರಿಯನ್ನು ಸಹಿಸುವುದಿಲ್ಲ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗದಗ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ, ಕರವೇ ಜಿಲ್ಲಾ ಸಂಚಾಲಕ ಸುರೇಶ ಮುಳಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ, ಯಮನೂರಸಾಬ್ ನದಾಪ್, ಯಲ್ಲಪ್ಪ ದೊಡ್ಡಮನಿ, ಶರಣಪ್ಪ ಅಡ್ನೂರ, ನಂದಪ್ಪ ಹಳ್ಳಿಕೇರಿ, ಶರಣಪ್ಪ ಹೊನ್ನಪ್ಪನವರ, ಮಂಜುನಾಥ ಭಜಂತ್ರಿ, ಹೇಮರಡ್ಡಿ ಸೋಮರಡ್ಡಿ, ಅಪ್ಪಣ್ಣ ಕಾಳೆ, ಹರಣಸಿಕಾರಿ (ಪಾರ್ಥಿ) ಸಮಾಜದ ಜಿಲ್ಲಾಧ್ಯಕ್ಷ ಚಂದ್ರು ಚೌಹಾನ ಸೇರಿದಂತೆ ಸಾವಿರಾರು ರೈತರು, ಕರವೇ ಕಾರ್ಯಕರ್ತರು, ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
“ಹನಿ ನೀರಾವರಿ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ರಾಜ್ಯ ಹೆದ್ದಾರಿ ನಿಯಮ ಉಲ್ಲಂಘಿಸಿ, ದೇವಸ್ಥಾನ ಹಾಗೂ ಫಲವತ್ತಾದ ಕೃಷಿಭೂಮಿಗೆ ಹಾನಿಯಾಗುವ ರೀತಿಯಲ್ಲಿ ಕಾಮಗಾರಿ ನಡೆಸುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.”
– ಎಂ.ಪಿ. ಪರ್ವತಗೌಡ್ರ, ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ್ರ ಬಣ)



