ಮುಂಬೈ: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಆರು ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ.
ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಎಥೆನಾಲ್ ಸಾಗಿಸುತ್ತಿದ್ದ ಕಂಟೇನರ್ ಲಾರಿಯೊಂದು ಮೊದಲು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಇಂಧನ ಸೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ಮತ್ತೊಂದು ಲೇನ್‌ಗೆ ತಿರುಗಿಸಲಾಗಿತ್ತು.
ಈ ವೇಳೆ ಪುಣೆಯಿಂದ ವಾರ್ಧಾಕ್ಕೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಅತಿವೇಗವಾಗಿ ಬಂದ ಮೆಣಸಿನಕಾಯಿ ತುಂಬಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯಡಿ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕೆಲವೇ ಕ್ಷಣಗಳಲ್ಲಿ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ತೀವ್ರವಾಗಿ ವ್ಯಾಪಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಹಾಗೂ ಲಾರಿ ಚಾಲಕ ಮತ್ತು ಕ್ಲೀನರ್ ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಕಿಯ ತೀವ್ರತೆಗೆ ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಮೃತರನ್ನು ವಾರ್ಧಾ ಜಿಲ್ಲೆಯ ಸಾಲೋಡ್ ಗ್ರಾಮದ ನಿವಾಸಿಗಳಾದ ರಾಜೇಶ್ ಟಿಪ್ಲೆ, ಅವರ ಪತ್ನಿ ಸುಷ್ಮಾ ಟಿಪ್ಲೆ, ಪುತ್ರಿ ಜಾಹ್ನವಿ ಟಿಪ್ಲೆ ಹಾಗೂ ಕಾರು ಚಾಲಕ ಅಂಕುಶ್ ರಾವತ್ ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಸಂಜಯ್ ಕುಮಾರ್ ಮತ್ತು ಕ್ಲೀನರ್ ಸಮರ್ಜಿತ್ ಪಾಲ್ ಕೂಡ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಸುರಕ್ಷತಾ ಪಡೆ, ವಾರ್ಧಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಬಳಿಕ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರವನ್ನು ಪುನಾರಂಭಿಸಲಾಯಿತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.



