ಮುಂಬೈ: ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಇದೀಗ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಹೆಮ್ಮೆಯಾಗಿ ಹೊರಹೊಮ್ಮಿದೆ. ನೆಟ್ಫ್ಲಿಕ್ಸ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಭಾರತೀಯ ಸಿನಿಮಾವಾಗಿ ದಾಖಲೆ ನಿರ್ಮಿಸಿರುವ ಈ ಚಿತ್ರ 37 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ನೆಟ್ಫ್ಲಿಕ್ಸ್ನ ಇಂಗ್ಲಿಷೇತರ ಚಿತ್ರಗಳ ವಿಭಾಗದಲ್ಲಿ ಅಗ್ರ ಸ್ಥಾನಕ್ಕೇರಿದೆ. ಆಕ್ಷನ್ ಮತ್ತು ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಆರ್. ಮಾಧವನ್, ಅಕ್ಷಯ್ ಖನ್ನಾ, ಸಂಜಯ್ ದತ್ ಹಾಗೂ ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 5ರಂದು ಬಿಡುಗಡೆಯಾದ ಈ ಸಿನಿಮಾ ಚಿತ್ರಮಂದಿರಗಳಲ್ಲೂ ಭರ್ಜರಿ ಯಶಸ್ಸು ಕಂಡಿತ್ತು. ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ಗೂಢಚರ್ಯೆ ನಡೆಸುವ ವ್ಯಕ್ತಿಯ ಸುತ್ತ ಸಾಗುವ ಕಥೆ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಯಶಸ್ಸಿನ ಬೆನ್ನಲ್ಲೇ ಚಿತ್ರದ ಮುಂದುವರಿದ ಭಾಗ ಕೂಡ ಗಮನ ಸೆಳೆದಿದೆ.
ನೆಟ್ಫ್ಲಿಕ್ಸ್ ಇಂಡಿಯಾದ ಒರಿಜಿನಲ್ ಕಂಟೆಂಟ್ನಲ್ಲೂ ಭಾರತೀಯ ಸರಣಿಗಳು ಸದ್ದು ಮಾಡಿವೆ. ‘ಅಕ್ಯೂಸ್ಡ್’ 19 ಮಿಲಿಯನ್ ವೀಕ್ಷಣೆಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪ್ರಿಯಾಂಕಾ ಮೋಹನ್ ಅಭಿನಯದ ‘ಮೇಡ್ ಇನ್ ಕೊರಿಯಾ’ 18 ಮಿಲಿಯನ್ ವೀಕ್ಷಣೆ ಪಡೆದು ಎರಡನೇ ಸ್ಥಾನದಲ್ಲಿದೆ. ಇಮ್ರಾನ್ ಹಶ್ಮಿ ನಟನೆಯ ‘ತಸ್ಕರಿ’ 16 ಮಿಲಿಯನ್ ವೀಕ್ಷಣೆಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ.
ಇದೇ ವೇಳೆ ಜಾಗತಿಕ ಸಿನಿಮಾ ವಿಭಾಗದಲ್ಲಿ ‘ವಾರ್ ಮೆಷಿನ್’ 147 ಮಿಲಿಯನ್ ವೀಕ್ಷಣೆಗಳೊಂದಿಗೆ ದಾಖಲೆ ನಿರ್ಮಿಸಿದೆ. ‘ದಿ ಆರ್ಐಪಿ’, ‘ಸ್ವಾಪ್ಡ್’, ‘ಕೆ-ಪಾಪ್ ಡೆಮನ್ ಹಂಟರ್ಸ್’ ಮತ್ತು ‘ಅಪೆಕ್ಸ್’ ಸಿನಿಮಾಗಳು ಕೂಡ ಭಾರೀ ವೀಕ್ಷಣೆಗಳನ್ನು ಪಡೆದಿವೆ. ವೆಬ್ ಸರಣಿಗಳ ಪೈಕಿ ‘ಹಿಸ್ ಅಂಡ್ ಹರ್ಸ್’ 104 ಮಿಲಿಯನ್ ವೀಕ್ಷಣೆಗಳೊಂದಿಗೆ ವಿಶ್ವದಾದ್ಯಂತ ಅಗ್ರಸ್ಥಾನ ಪಡೆದುಕೊಂಡಿದೆ.



