ಬೆಂಗಳೂರು: ಆ್ಯಪ್‌ನಲ್ಲಿ ಹುಡುಗಿಯರು ಇದ್ದಾರೆ ಎಂದು ನಂಬಿಸಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಸುಲಿಗೆ ಮಾಡಿದ ಆರೋಪದಡಿ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಚೇತನ್ ಮನು, ಶಾಬು, ಮಂಜುನಾಥ, ಜಯಕುಮಾರ್, ಅರುಣ್ ಕೀರ್ತಿ, ಕಾಂತರಾಜು ಹಾಗೂ ಸಂದೀಪ್ ಸೇರಿದಂತೆ ಇತರರು ಎಂದು ಗುರುತಿಸಲಾಗಿದೆ.
ಆರೋಪಿಗಳು ಮೊದಲು ಆ್ಯಪ್‌ವೊಂದರಲ್ಲಿ ಹುಡುಗಿಯರು ಪರಿಚಯವಾಗುತ್ತಾರೆ ಎಂದು ಪೋಸ್ಟ್ ಮಾಡಿದ್ದರು ಎನ್ನಲಾಗಿದೆ. ಇದನ್ನು ನಂಬಿದ ವ್ಯಕ್ತಿಯೊಬ್ಬರು ಹುಡುಗಿಯನ್ನು ಭೇಟಿಯಾಗಲು ಮುಂದಾಗಿದ್ದರು. ಈ ವೇಳೆ ಆರೋಪಿಗಳು ಆತನನ್ನು ತಮ್ಮ ಬಲೆಗೆ ಬೀಳಿಸಿ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯರನ್ನು ಭೇಟಿಯಾಗಲು ಸಂತ್ರಸ್ತ ವ್ಯಕ್ತಿ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಚ್‌ಆರ್‌ಬಿಆರ್ ಲೇಔಟ್ ಬಳಿಗೆ ತೆರಳಿದ್ದರು. ಅಲ್ಲಿ ಆಟೋದಲ್ಲಿ ಯುವತಿಯರು ಕುಳಿತಿರುವುದು ಕಂಡುಬಂದಿತ್ತು. ಆದರೆ, ಅವರನ್ನು ಭೇಟಿಯಾಗುವ ಮುನ್ನವೇ ಆರೋಪಿಗಳು ವ್ಯಕ್ತಿಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.
ಬಳಿಕ ಸಂತ್ರಸ್ತನನ್ನು ಆಟೋದಲ್ಲಿ ನಗರದ ವಿವಿಧ ಭಾಗಗಳಲ್ಲಿ ಸುತ್ತಾಡಿಸಿ, ಆತನ ಬಳಿಯಿದ್ದ ಹಣ, ಮೊಬೈಲ್ ಫೋನ್ ಹಾಗೂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಮಾಹಿತಿ ಪಡೆದ ಸಿಸಿಬಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಎರಡು ಆಟೋಗಳು, ನಾಲ್ಕು ದ್ವಿಚಕ್ರ ವಾಹನಗಳು, 13 ಮೊಬೈಲ್ ಫೋನ್‌ಗಳು ಹಾಗೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

