HomeHassanಹೊಳೆನರಸೀಪುರದಲ್ಲಿ ಚೆನ್ನಮ್ಮರಿಗೆ ಭಾವಪೂರ್ಣ ವಿದಾಯ: ಜನಸಾಗರದ ನಡುವೆ ಅಂತಿಮ ಯಾತ್ರೆ, ಹರದನಹಳ್ಳಿಯಲ್ಲಿ ಅಂತಿಮ ವಿಧಿ

ಹೊಳೆನರಸೀಪುರದಲ್ಲಿ ಚೆನ್ನಮ್ಮರಿಗೆ ಭಾವಪೂರ್ಣ ವಿದಾಯ: ಜನಸಾಗರದ ನಡುವೆ ಅಂತಿಮ ಯಾತ್ರೆ, ಹರದನಹಳ್ಳಿಯಲ್ಲಿ ಅಂತಿಮ ವಿಧಿ

For Dai;y Updates Join Our whatsapp Group

ಹಾಸನ: ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಆರಂಭವಾಗಿದ್ದು, ಅಪಾರ ಸಂಖ್ಯೆಯ ಜನರು ಕಣ್ಣೀರಿನ ವಿದಾಯ ಸಲ್ಲಿಸುತ್ತಿದ್ದಾರೆ. ಪಾರ್ಥಿವ ಶರೀರವನ್ನು ಹೊತ್ತ ಮುಕ್ತಿವಾಹನವನ್ನು ಮಲ್ಲಿಗೆ ಹೂ ಮತ್ತು ತುಳಸಿ ಮಾಲೆಗಳಿಂದ ಅಲಂಕರಿಸಲಾಗಿದ್ದು, ಮಾರ್ಗದುದ್ದಕ್ಕೂ ಸಾರ್ವಜನಿಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಹೊಳೆನರಸೀಪುರದಿಂದ ಆರಂಭವಾಗಿರುವ ಅಂತಿಮ ಯಾತ್ರೆ ತಾಲೂಕಿನ ಹಲವು ಗ್ರಾಮಗಳ ಮೂಲಕ ಸಾಗಲಿದೆ. ನಾಗಲಾಪುರ, ಹುಚ್ಚನಕೊಪ್ಪಲು, ಸಂಕನಹಳ್ಳಿ, ಕಳ್ಳಿಕೊಪ್ಪಲು, ಕಟ್ಟಹಳ್ಳಿ ಬಾರೆ, ಮಾರಗೊಡನಹಳ್ಳಿ, ಪಡುವಲಹಿಪ್ಪೆ, ಹನುಮನಹಳ್ಳಿ, ಬಸವನಾಯಕನಹಳ್ಳಿ, ಹಂಗರಹಳ್ಳಿ ಮತ್ತು ಹಳೇಕೋಟೆ ಗ್ರಾಮಗಳಲ್ಲಿ ಅಂತಿಮ ಯಾತ್ರೆ ನಡೆಯಲಿದೆ.

ಅಂತಿಮ ಯಾತ್ರೆಯ ಬಳಿಕ ಮಧ್ಯಾಹ್ನ 3 ಗಂಟೆ ವೇಳೆಗೆ ಹರದನಹಳ್ಳಿಯ ಅಂತ್ಯಕ್ರಿಯೆ ಸ್ಥಳಕ್ಕೆ ಪಾರ್ಥಿವ ಶರೀರ ತಲುಪಲಿದೆ. 45 ನಿಮಿಷಗಳ ಕಾಲ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಸಂಜೆ 4 ಗಂಟೆ ವೇಳೆಗೆ ಅಂತಿಮ ಸಂಸ್ಕಾರ ನೆರವೇರಲಿದೆ.

ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಣ್ಣನ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ. 15ಕ್ಕೂ ಹೆಚ್ಚು ಅರ್ಚಕರು ಭಾಗವಹಿಸಲಿದ್ದು, ವಾಸ್ತು ಪ್ರಕಾರ ಅಂತಿಮ ಸಂಸ್ಕಾರದ ವ್ಯವಸ್ಥೆ ಮಾಡಲಾಗಿದೆ.

ರಂಗನಾಥಸ್ವಾಮಿ ಬೆಟ್ಟದ ತಪ್ಪಲನ್ನು ಅಂತ್ಯಕ್ರಿಯೆಗೆ ಆಯ್ಕೆ ಮಾಡಿರುವುದರ ಹಿಂದೆ ಚೆನ್ನಮ್ಮ ಅವರ ಭಾವನಾತ್ಮಕ ನಂಟಿದೆ. ಹರದನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳೊಂದಿಗೆ ಅವರು ಹೊಂದಿದ್ದ ಆತ್ಮೀಯ ಸಂಬಂಧ, ಈ ಭಾಗದ ಜನರ ಮೇಲಿನ ಪ್ರೀತಿ ಹಾಗೂ ದೈವ ಭಕ್ತಿಯ ಹಿನ್ನೆಲೆಯಲ್ಲಿ ಕುಟುಂಬ ಈ ಸ್ಥಳವನ್ನು ಆಯ್ಕೆ ಮಾಡಿದೆ.

ಚೆನ್ನಮ್ಮ ಅವರ ಅಳಿಯ ಹಾಗೂ ಸಂಸದ ಸಿ.ಎನ್. ಮಂಜುನಾಥ್, ಕುಟುಂಬದ ಸದಸ್ಯರೆಲ್ಲರೂ ಚರ್ಚಿಸಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ಸ್ಥಳದಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದಿದ್ದಾರೆ.

ಹರದನಹಳ್ಳಿ ದೇವೇಗೌಡರ ತವರೂರಾಗಿದ್ದು, ಚೆನ್ನಮ್ಮ ಅವರ ಜೀವನದ ಹಲವು ನೆನಪುಗಳನ್ನು ಹೊಂದಿರುವ ಸ್ಥಳವಾಗಿದೆ. ಮಾವಿನಕೆರೆ ರಂಗನಾಥಸ್ವಾಮಿ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಅವರು, ಕುಟುಂಬದ ಒಳಿತಿಗಾಗಿ ಹಾಗೂ ರೈತರ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತಿದ್ದರು. ಇದೀಗ ಅದೇ ದೈವ ಸನ್ನಿಧಿಯ ನೆರಳಿನಲ್ಲಿ ಅವರ ಅಂತಿಮ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img