ಹಾಸನ: ಹಾಸನದ ದೊಡ್ಡಪುರ ಗ್ರಾಮದ ಸಮೀಪ ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಟೈಯರ್ ಸಿಡಿದು ಪಲ್ಟಿಯಾಗಿದ್ದು, ಸುಮಾರು ₹15 ಲಕ್ಷ ಮೌಲ್ಯದ ಬಿಯರ್ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಘಟನೆಯಿಂದ ಒಂದು ಬದಿಯ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ ಸುಮಾರು 1,100 ಬಿಯರ್ ಬಾಟಲ್‌ಗಳನ್ನು ಸಾಗಿಸುತ್ತಿದ್ದ ಲಾರಿ ದೊಡ್ಡಪುರ ಗ್ರಾಮದ ಬಳಿ ತಲುಪುತ್ತಿದ್ದಂತೆ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಡಿವೈಡರ್ ಏರಿ ಪಲ್ಟಿಯಾಗಿದೆ.
ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಲೆಜೆಂಡ್, ರಾಯಲ್, ಪವರ್ ಕೂಲ್ ಹಾಗೂ ಸನ್ನಿ ಬೀಚಸ್ ಬ್ರ್ಯಾಂಡ್‌ನ ಬಿಯರ್ ಬಾಟಲ್‌ಗಳು ಮತ್ತು ಟಿನ್‌ಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿದ್ದು, ಬಹುತೇಕ ಮದ್ಯ ನಷ್ಟವಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ತೆರವು ಹಾಗೂ ಸಂಚಾರ ಪುನಃಸ್ಥಾಪನೆಗೆ ಕ್ರಮ ಕೈಗೊಂಡಿದ್ದಾರೆ.



