ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಪಾಸ್ಪೋರ್ಟ್ಗಳನ್ನು ರದ್ದುಗೊಳಿಸಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದರೂ, ಈ ಕುರಿತು ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್ಗಳಲ್ಲಿ, ಪ್ರತಿಭಟನೆ ವೇಳೆ ಹಿಂಸಾಚಾರ, ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವವರನ್ನು ಗುರುತಿಸಿ ಅವರ ಪಾಸ್ಪೋರ್ಟ್ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ದೆಹಲಿ ಪೊಲೀಸರು ಆರಂಭಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ, ವಿಡಿಯೊ ದಾಖಲೆಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂಬ ಮಾಹಿತಿಯೂ ಹರಿದಾಡಿತ್ತು.
ಆದರೆ ಈ ಎಲ್ಲ ಸುದ್ದಿಗಳನ್ನು ದೆಹಲಿ ಪೊಲೀಸರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಸಿಜೆಪಿ ಪ್ರತಿಭಟನಾಕಾರರ ಪಾಸ್ಪೋರ್ಟ್ಗಳನ್ನು ರದ್ದುಗೊಳಿಸುವ ಕುರಿತು ಯಾವುದೇ ಅಧಿಕೃತ ಆದೇಶ ಅಥವಾ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ಆಧಾರರಹಿತ ಹಾಗೂ ದಾರಿತಪ್ಪಿಸುವ ಮಾಹಿತಿಯನ್ನು ನಂಬಬಾರದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಯಾವುದೇ ಮಹತ್ವದ ಮಾಹಿತಿ ಅಥವಾ ಕ್ರಮಗಳ ಕುರಿತು ಅಧಿಕೃತ ಮೂಲಗಳಿಂದ ಪ್ರಕಟವಾಗುವ ಮಾಹಿತಿಯನ್ನೇ ನಂಬುವಂತೆ ದೆಹಲಿ ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ.



