ಬೆಂಗಳೂರು: ಕೆಪಿಎಸ್ಸಿ ಹಗರಣದ ವಿರುದ್ಧ ದೂರು ನೀಡಿದ್ದ ಅಭ್ಯರ್ಥಿ ಮಂಜುನಾಥ್ ಅವರಿಗೆ ಇದೀಗ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ವೆಟರನರಿ ಆಫೀಸರ್ ನೇಮಕಾತಿಗೆ ಸಂಬಂಧಿಸಿದಂತೆ ಅನುಮಾನಾಸ್ಪದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದೇಕೆ ಎಂದು ಪ್ರಶ್ನಿಸಿ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಮಂಜುನಾಥ್ ಅವರಿಗೆ ಕರೆ ಮಾಡಿದ ಅನಾಮಿಕ ವ್ಯಕ್ತಿ, ವೆಟರನರಿ ಆಫೀಸರ್ಗಳ ಪಟ್ಟಿಯಲ್ಲಿ ತನ್ನ ಸ್ನೇಹಿತೆಯೊಬ್ಬರ ಹೆಸರನ್ನು ನೀಡಿದ್ದೀರಿ. ಯಾವ ಸಾಕ್ಷ್ಯ ಇಟ್ಟುಕೊಂಡು ಆ ಹೆಸರು ನೀಡಿದ್ದೀರಿ? ನಿಮಗೆ ಅದು ಖಚಿತವಾಗಿದೆಯೇ? ಯಾವುದೇ ಪ್ರೂಫ್ ಇದೆಯೇ? ಎಂದು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.
ಅಲ್ಲದೆ, ‘ನೀನು ಎಲ್ಲಿದ್ದೀಯಾ? ಯಾಕೆ ದೂರು ಕೊಟ್ಟೆ? ಏನು ಎವಿಡೆನ್ಸ್ ಇದೆ ಎಂದು ದೂರು ಕೊಟ್ಟೆ? 40 ಪರ್ಸೆಂಟ್ ಸ್ಕ್ಯಾಮ್ ಆಗಿದೆ ಅಂತ ಹೇಳುತ್ತಿದ್ದೀರಲ್ಲ, ಅದಕ್ಕೆಲ್ಲ ಪ್ರೂಫ್ ಇದೆಯಾ?’ ಎಂದು ಪ್ರಶ್ನಿಸಿ ಆವಾಜ್ ಹಾಕಿದ್ದಾನೆ ಎನ್ನಲಾಗಿದೆ.
ಅನುಮಾನಾಸ್ಪದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದೇಕೆ, ಈ ರೀತಿ ಮಾಡಲು ನಿಮಗೆ ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ ಅನಾಮಿಕ, ‘ನಿಮ್ಮ ಮೇಲೆ ನಾವು ಕೇಸ್ ಮಾಡುತ್ತೇವೆ. ಮಾನಹಾನಿ ಪ್ರಕರಣ ದಾಖಲಿಸುತ್ತೇವೆ. ನಮಗೂ ಲಾಯರ್ ಇದ್ದಾರೆ, ಎಲ್ಲವೂ ಗೊತ್ತಿದೆ’ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ, ‘ಇದೆಲ್ಲಾ ಮಾಡಲು ನೀನೇನು ಸರ್ಕಾರನಾ?’ ಎಂದು ಪ್ರಶ್ನಿಸಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಕೆಪಿಎಸ್ಸಿ ವೆಟರನರಿ ಆಫೀಸರ್ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮದ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ, ಈ ಹಗರಣದ ವಿರುದ್ಧ ದೂರು ನೀಡಿದ್ದ ಅಭ್ಯರ್ಥಿಗೆ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿರುವ ಆರೋಪ ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.



