ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ಆಂಧ್ರಪ್ರದೇಶದ ಎಮ್ಮಿಗನೂರು ಸಮೀಪ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಉದ್ಯಮಿ ರವಿ ಶೆಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಿರುಪತಿಯಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ತೀವ್ರವಾಗಿ ಜಖಂಗೊಂಡಿದ್ದು, ಉದ್ಯಮಿ ರವಿ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ ಎಮ್ಮಿಗನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಮಂತ್ರಾಲಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕಾರಣಗಳ ಕುರಿತು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಮುಂದುವರಿಸಿದ್ದಾರೆ.



