ರಾಮನಗರ: ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದಲ್ಲಿ ಕಬ್ಬಿನ ಗದ್ದೆಯೊಂದರಲ್ಲಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ರೈತ ನಾಗೇಶ್ ಅವರ ಕಬ್ಬಿನ ಗದ್ದೆಯಲ್ಲಿ ಸುಮಾರು ನಾಲ್ಕೈದು ದಿನಗಳ ಪ್ರಾಯದ ನಾಲ್ಕು ಚಿರತೆ ಮರಿಗಳು ಕಂಡುಬಂದಿವೆ. ಮರಿಗಳನ್ನು ಕಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮರಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವುಗಳ ತಾಯಿ ಚಿರತೆ ಸುತ್ತಮುತ್ತಲೇ ಇರುವ ಸಾಧ್ಯತೆಯಿದ್ದು, ಅದರ ಚಲನವಲನದ ಮೇಲೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿಗಾ ಇರಿಸಿದೆ. ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಸ್ಥಳದಲ್ಲಿ ಬೋನ್ ಅಳವಡಿಸುವ ಕಾರ್ಯಕ್ಕೂ ಇಲಾಖೆ ಮುಂದಾಗಿದೆ.
ಕಬ್ಬಿನ ಗದ್ದೆಯಲ್ಲಿ ಏಕಾಏಕಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದ್ದು, ಅರಣ್ಯ ಇಲಾಖೆ ಮುಂದಿನ ಕ್ರಮದತ್ತ ಗಮನಹರಿಸಿದೆ.



