ಬೆಂಗಳೂರು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ನಡುವೆ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ಮೂಲದ ನಾಲ್ವರು ಎನ್‌ಆರ್‌ಐ ಕನ್ನಡಿಗರು ನಾಪತ್ತೆಯಾಗಿದ್ದಾರೆ.
ಮೂಲತಃ ಬೆಂಗಳೂರಿನವರಾಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಾಲ್ವರು ಯಾತ್ರಿಕರು ಮಾನಸ ಸರೋವರ ಯಾತ್ರೆಗಾಗಿ ಅಮೆರಿಕದಿಂದ ನೇಪಾಳಕ್ಕೆ ತೆರಳಿದ್ದರು. ಪ್ರವಾಹ ಸಂಭವಿಸಿದ ಪ್ರದೇಶದಲ್ಲಿದ್ದ ಚೀನಾ ರಾಯಭಾರ ಕಚೇರಿಗೆ ತೆರಳಿದ್ದ ಅವರು, ದುರಂತದ ಬಳಿಕ ಸ್ನೇಹಿತರು ಹಾಗೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ನಾಲ್ವರು ನಾಪತ್ತೆಯಾಗಿರುವ ಕುರಿತು ಅವರ ಸ್ನೇಹಿತರು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದು, ಪತ್ತೆ ಹಾಗೂ ರಕ್ಷಣೆಗೆ ನೆರವು ಕೋರಿದ್ದಾರೆ.
ಕರ್ನಾಟಕದ ಇಬ್ಬರು ಸುರಕ್ಷಿತ
ಇದೇ ವೇಳೆ ಹೈದರಾಬಾದ್‌ನ 23 ಮಂದಿ ಹಾಗೂ ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 25 ಮಂದಿಯ ತಂಡ ನೇಪಾಳ ಪ್ರವಾಸ ಕೈಗೊಂಡಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಅವರನ್ನು ಕೆಎಸ್‌ಡಿಎಂಎ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದೆ.
ಇಬ್ಬರೂ ಸುರಕ್ಷಿತವಾಗಿದ್ದು, ಅವರನ್ನು ಅಪಾಯದ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ರಕ್ಷಿಸಲ್ಪಟ್ಟ ಇಬ್ಬರು ಕನ್ನಡಿಗರನ್ನು ನೇಪಾಳದಿಂದ ನವದೆಹಲಿಗೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ. ಮತ್ತೊಂದೆಡೆ, ನಾಪತ್ತೆಯಾಗಿರುವ ಬೆಂಗಳೂರಿನ ನಾಲ್ವರು ಎನ್‌ಆರ್‌ಐ ಕನ್ನಡಿಗರ ಪತ್ತೆಗಾಗಿ ಅಧಿಕಾರಿಗಳು ಸಂಪರ್ಕ ಹಾಗೂ ರಕ್ಷಣಾ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.



