ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2026)ನ 17ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟರ್ ಟಿಮ್ ಸೈಫರ್ಟ್ ಸ್ಫೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಟ್ರಿನ್ಬಾಗೊ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಸೈಫರ್ಟ್, ಕೇವಲ 61 ಎಸೆತಗಳಲ್ಲಿ ಅಜೇಯ 105 ರನ್ ಬಾರಿಸುವ ಮೂಲಕ ಈ ಆವೃತ್ತಿಯ ಮೊದಲ ಶತಕ ದಾಖಲಿಸಿದ್ದಾರೆ.
https://x.com/CPL/status/2092775538163081700
ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಟಿಆರ್ಕೆ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಸೈಫರ್ಟ್, ತಮ್ಮ ಅಮೋಘ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಶತಕ ಪೂರ್ಣಗೊಳಿಸಿದ ಬಳಿಕ ಟಿಮ್ ಸೈಫರ್ಟ್ ಅವರ ಸಂಭ್ರಮಾಚರಣೆ ಕೂಡ ಅಭಿಮಾನಿಗಳ ಗಮನ ಸೆಳೆಯಿತು. ಶತಕದ ಬಳಿಕ ಹೆಲ್ಮೆಟ್ ತೆಗೆದು ಬ್ಯಾಟ್ ಎತ್ತಿದ ಸೈಫರ್ಟ್, ಮೈದಾನದಲ್ಲೇ ವಿಭಿನ್ನ ರೀತಿಯಲ್ಲಿ ಕುಣಿದು ಸಂಭ್ರಮಿಸಿದರು. ನ್ಯೂಜಿಲೆಂಡ್ ಆಟಗಾರನ ಈ ಮೋಜಿನ ನೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
211 ರನ್ಗಳ ಕಠಿಣ ಗುರಿ ಬೆನ್ನತ್ತಿದ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡಕ್ಕೆ ಸೇಂಟ್ ಲೂಸಿಯಾ ಕಿಂಗ್ಸ್ ಬೌಲರ್ಗಳು ಯಾವುದೇ ಅವಕಾಶ ನೀಡಲಿಲ್ಲ. ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಟಿಕೆಆರ್ ತಂಡ ನಿಗದಿತ ಓವರ್ಗಳಲ್ಲಿ 175 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸೇಂಟ್ ಲೂಸಿಯಾ ಕಿಂಗ್ಸ್ 36 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ಇನ್ನು ಟಿಮ್ ಸೈಫರ್ಟ್ ಅವರ ಈ ಶತಕವು ಅವರ ಸದ್ಯದ ಅಮೋಘ ಫಾರ್ಮ್ಗೆ ಮತ್ತೊಂದು ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ ಯುಕೆಯಲ್ಲಿ ನಡೆದ ‘ದಿ ಹಂಡ್ರೆಡ್ 2026’ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೈಫರ್ಟ್, ಟೂರ್ನಿಯ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಯನ್ನೂ ಗೆದ್ದಿದ್ದರು.
ಇದೀಗ ಅದೇ ಅದ್ಭುತ ಫಾರ್ಮ್ ಅನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲೂ ಮುಂದುವರಿಸಿರುವ ಸೈಫರ್ಟ್, ಸಿಪಿಎಲ್ನಲ್ಲಿ ಎರಡು ಶತಕಗಳನ್ನು ದಾಖಲಿಸಿದ ಬ್ಯಾಟರ್ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇದಕ್ಕೂ ಮುನ್ನ 2025ರ ಸಿಪಿಎಲ್ ಆವೃತ್ತಿಯಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಪರ ಆಡಿದ್ದ ಸೈಫರ್ಟ್, ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ವಿರುದ್ಧ ಕೇವಲ 53 ಎಸೆತಗಳಲ್ಲಿ ಅಜೇಯ 125 ರನ್ ಸಿಡಿಸಿದ್ದರು. ಇದೀಗ ಮತ್ತೊಮ್ಮೆ ಅದೇ ತಂಡದ ಪರ ಅಬ್ಬರಿಸಿರುವ ಅವರು, ಟ್ರಿನ್ಬಾಗೊ ನೈಟ್ ರೈಡರ್ಸ್ ವಿರುದ್ಧ 61 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿ ತಮ್ಮ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.



