ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಆದೇಶದಂತೆ ಗದಗ ಜಿಲ್ಲಾ ಖಜಾನೆ ಇಲಾಖೆಯ ಉಪನಿರ್ದೇಶಕರಾಗಿ ಟಿ.ಎಂ. ದೇವರಮನಿ ಅಧಿಕಾರ ಸ್ವೀಕರಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಖಜಾನೆ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ, ಶಾಲು ಹೊದಿಸಿ ನೂತನ ಉಪನಿರ್ದೇಶಕರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಟಿ.ಎಂ. ದೇವರಮನಿ, ಸರ್ಕಾರದ ನಿಯಮಾನುಸಾರ ಪಾರದರ್ಶಕ, ಜವಾಬ್ದಾರಿಯುತ ಹಾಗೂ ಜನಸ್ನೇಹಿ ಆಡಳಿತಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರದೊಂದಿಗೆ ಖಜಾನೆ ಇಲಾಖೆಯ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಸುಗಮವಾಗಿ ನಡೆಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಶರಣು ಗೊಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ, ಶಿವಕುಮಾರ ಕುರಿ, ಎಂ.ಎಚ್. ಕಂಬಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ನೂತನ ಉಪನಿರ್ದೇಶಕರಿಗೆ ಶುಭ ಹಾರೈಸಿದರು.
ಆತ್ಮೀಯ ವಾತಾವರಣದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದೇವರಮನಿ ಅವರ ಆಡಳಿತಾವಧಿ ಯಶಸ್ವಿಯಾಗಲೆಂದು ಹಾರೈಸಿದರು.



