ಬೆಂಗಳೂರು: ಎಲ್‌ನಿನೋ ಪರಿಣಾಮದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉತ್ತರ ಕನ್ನಡ, ಉಡುಪಿ, ಮಂಡ್ಯ ಸೇರಿದಂತೆ ಒಟ್ಟು 25 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ವಿಜಯನಗರ ಜಿಲ್ಲೆಯಲ್ಲಿ ಮಳೆ ಕೊರತೆ ತೀವ್ರವಾಗಿದ್ದು, ಬರದ ಆತಂಕ ಎದುರಾಗಿದೆ. ರಾಜ್ಯದ ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಯಷ್ಟು ಮಳೆಯಾಗಿದೆ ಎನ್ನಲಾಗಿದೆ. ಬೆಳಗಾವಿಯಲ್ಲೂ ಕಡಿಮೆ ಮಳೆಯ ಪರಿಣಾಮ ರೈತರು ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಅಲ್ಪ ಪ್ರಮಾಣದ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಕಡಿಮೆಯಾಗಿದ್ದರೂ, ಕೃಷಿಗೆ ಅಗತ್ಯವಾದ ನೀರಿನ ಕೊರತೆ ಮುಂದುವರಿದಿದೆ. ಜಲಾಶಯಗಳ ನೀರನ್ನು ಕೃಷಿಗೆ ಬಳಸಲು ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಇದರ ನಡುವೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಕಳೆದ 15 ದಿನಗಳಲ್ಲಿ ಸುರಿದ ಮಳೆಯಿಂದ ಜಲಾಶಯದ ನೀರಿನ ಮಟ್ಟದಲ್ಲಿ 17 ಅಡಿ ಏರಿಕೆಯಾಗಿದೆ.
2,859 ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನೂ 8 ಅಡಿ ಬಾಕಿ ಉಳಿದಿದೆ. ಸದ್ಯ ಜಲಾಶಯಕ್ಕೆ 3 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ಶೀಘ್ರದಲ್ಲೇ ಜಲಾಶಯ ತುಂಬುವ ಸಾಧ್ಯತೆ ಇದೆ.



