ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ಅಮಾನತುಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಪುತ್ರಿಯರ ಆಯ್ಕೆ ಸೇರಿದಂತೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಜುಲೈ 29ರೊಳಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಸೂಚಿಸಿದರು. ಇದೇ ವೇಳೆ, ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣವನ್ನು ವರ್ಗಾಯಿಸಲು ಮುಂದಾದರೆ, ಅರ್ಜಿದಾರರು ಮತ್ತೆ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಅರ್ಜಿದಾರರ ಪರ ವಕೀಲರು, ಜುಲೈ 3ರಂದು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ವಿಧಾನದೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಅದು ಕೇವಲ ಮೇಲ್ನೋಟದ ಕ್ರಮವಾಗಿದ್ದು, ಮೂಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆದಿಲ್ಲ ಎಂದು ವಾದಿಸಿದರು. ಸಾರ್ವಜನಿಕರ ಆಕ್ರೋಶ ತಣಿಸಲು ಸರ್ಕಾರ ಎಸ್‌ಐಟಿ ರಚಿಸುವ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅರ್ಜಿಯಲ್ಲಿ, ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ನೇಮಕಾತಿ ಪ್ರಕ್ರಿಯೆಯಲ್ಲಿ ಹಿತಾಸಕ್ತಿ ಸಂಘರ್ಷ ಉಂಟುಮಾಡುವ ರೀತಿಯಲ್ಲಿ ವರ್ತಿಸಿ, ತಮ್ಮ ಇಬ್ಬರು ಪುತ್ರಿಯರ ಆಯ್ಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, 3ಬಿ ಮೀಸಲಾತಿ ಪಡೆಯಲು ಅಗತ್ಯವಿರುವ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯವನ್ನು ಕೇವಲ ₹40 ಸಾವಿರ ಎಂದು ತೋರಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಉಲ್ಲೇಖಿಸಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 29ಕ್ಕೆ ಹೈಕೋರ್ಟ್ ನಿಗದಿಪಡಿಸಿದೆ.

