ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ (ಡ್ರಿಂಕ್ ಅಂಡ್ ಡ್ರೈವ್) ಪ್ರಕರಣದಲ್ಲಿ ಬಂಧನಕ್ಕೊಳಗಾದ ವಾರ್ನರ್, ಸಿಡ್ನಿ ನ್ಯಾಯಾಲಯದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಅವರಿಗೆ ಆಸ್ಟ್ರೇಲಿಯಾ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯ ವಿರಾಮದ ವೇಳೆ ತವರಿಗೆ ಮರಳಿದ್ದ ವಾರ್ನರ್, ಸಿಡ್ನಿಯ ಮರೂಬ್ರಾ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಸಮಯ ಕಳೆದ ಬಳಿಕ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ.
ಪರೀಕ್ಷೆಯಲ್ಲಿ ವಾರ್ನರ್ ಅವರ ರಕ್ತದಲ್ಲಿ 0.104 ಪ್ರಮಾಣದ ಆಲ್ಕೋಹಾಲ್ ಪತ್ತೆಯಾಗಿದ್ದು, ಇದು ಆಸ್ಟ್ರೇಲಿಯಾದಲ್ಲಿ ಅನುಮತಿಸಲಾದ 0.05 ಮಿತಿಗಿಂತ ಹೆಚ್ಚಾಗಿತ್ತು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ವೇಳೆ ವಾರ್ನರ್ ಪರ ವಕೀಲ ಬೊಬ್ಬಿ ಹಿಲ್ ನ್ಯಾಯಾಲಯಕ್ಕೆ ಹಾಜರಾಗಿ, ತಮ್ಮ ಕಕ್ಷಿದಾರರ ಪರವಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸ್ನೇಹಿತರ ಮನೆಯಲ್ಲಿ ವೈನ್ ಸೇವಿಸಿದ ಬಳಿಕ ಟ್ಯಾಕ್ಸಿ ಮೂಲಕ ಮನೆಗೆ ತೆರಳುವ ಬದಲು ಸ್ವತಃ ಕಾರು ಚಲಾಯಿಸಿದ್ದು ದೊಡ್ಡ ತಪ್ಪಾಗಿದೆ ಎಂಬ ಅರಿವು ವಾರ್ನರ್ ಅವರಿಗೆ ಉಂಟಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಪ್ರಕರಣದ ಶಿಕ್ಷೆಯನ್ನು ಆಗಸ್ಟ್ 18ರಂದು ಸಿಡ್ನಿ ನ್ಯಾಯಾಲಯ ಪ್ರಕಟಿಸಲಿದೆ. ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ, ಪ್ರಕರಣದ ಗಂಭೀರತೆಯನ್ನು ಆಧರಿಸಿ ಜೈಲು ಶಿಕ್ಷೆ, ಚಾಲನಾ ಪರವಾನಗಿ ಅಮಾನತು ಹಾಗೂ ದಂಡ ಸೇರಿದಂತೆ ವಿವಿಧ ಶಿಕ್ಷೆಗಳನ್ನು ವಿಧಿಸುವ ಅವಕಾಶವಿದೆ.
ಕೆಲವು ವರದಿಗಳ ಪ್ರಕಾರ, ಅವರಿಗೆ ಕನಿಷ್ಠ 9 ತಿಂಗಳ ಜೈಲು ಶಿಕ್ಷೆ, 6 ತಿಂಗಳ ಕಾಲ ಚಾಲನಾ ಪರವಾನಗಿ ಅಮಾನತು ಹಾಗೂ ಸುಮಾರು ₹1.20 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಆದರೆ ಅಂತಿಮ ತೀರ್ಪು ನ್ಯಾಯಾಲಯದ ನಿರ್ಧಾರವನ್ನು ಅವಲಂಬಿಸಿರುತ್ತದೆ.
ಡೇವಿಡ್ ವಾರ್ನರ್ ಈಗಾಗಲೇ 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಅಮಾನತು ಮತ್ತು ನಿಷೇಧ ಸೇರಿದಂತೆ ಹಲವು ಶಿಕ್ಷೆಗಳನ್ನು ಎದುರಿಸಿದ್ದರು. ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದರೂ, ಹೆಚ್ಚು ಕಾಲ ಮುಂದುವರಿಯದೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಪ್ರಸ್ತುತ ಅವರು ವಿವಿಧ ಫ್ರಾಂಚೈಸಿ ಹಾಗೂ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಆಡುತ್ತಿದ್ದಾರೆ.
ಈ ಹೊಸ ಪ್ರಕರಣವು ವಾರ್ನರ್ ಅವರ ಲೀಗ್ ಕ್ರಿಕೆಟ್ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂಬರುವ ಬಿಗ್ ಬ್ಯಾಷ್ ಲೀಗ್ (BBL) ಟೂರ್ನಿಯಲ್ಲಿ ಸಿಡ್ನಿ ಥಂಡರ್ ತಂಡದೊಂದಿಗೆ ಅವರ ಭವಿಷ್ಯದ ಕುರಿತು ಪ್ರಶ್ನೆಗಳು ಮೂಡಿದ್ದು, ನಾಯಕತ್ವ ಸೇರಿದಂತೆ ತಂಡದಲ್ಲಿನ ಸ್ಥಾನಕ್ಕೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.



