ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಯ ಮುನ್ನವೇ ಭಾರೀ ಬದಲಾವಣೆಗಳಿಗೆ ಒಳಗಾಗಿದೆ. ಸುಮಾರು ಏಳು ತಿಂಗಳ ವಿಳಂಬದ ಬಳಿಕ ಜುಲೈ 23ರಂದು ತೆರೆಕಾಣಲಿರುವ ಚಿತ್ರದ ಅಂತಿಮ ಆವೃತ್ತಿಯಲ್ಲಿ ವಿಜಯ್ ಅವರ ರಾಜಕೀಯ ಯಶಸ್ಸಿಗೆ ತಕ್ಕಂತೆ ಹಲವು ಹೊಸ ದೃಶ್ಯಗಳು ಹಾಗೂ ಟೈಟಲ್ ಬದಲಾವಣೆಗಳನ್ನು ಸೇರಿಸಲಾಗಿದೆ.
ಜನವರಿಯಲ್ಲೇ ಬಿಡುಗಡೆಯಾಗಬೇಕಿದ್ದ ಚಿತ್ರ ಸೆನ್ಸಾರ್ ಪ್ರಮಾಣಪತ್ರದ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈ ಮಧ್ಯೆ ವಿಜಯ್ ರಾಜಕೀಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ತಮಿಳುನಾಡಿನ ಮುಖ್ಯಮಂತ್ರಿ ಆದ ಬಳಿಕ ಚಿತ್ರತಂಡ ಸಿನಿಮಾ ಅಂತಿಮ ಕಟ್ನಲ್ಲಿ ಹಲವು ಬದಲಾವಣೆಗಳನ್ನು ಕೈಗೊಂಡಿದೆ.
ಈ ಬಾರಿ ಚಿತ್ರದ ಆರಂಭದಲ್ಲೇ ‘ದಳಪತಿ ವಿಜಯ್’ ಬದಲಾಗಿ ‘ಮಾನ್ಯ ತಮಿಳುನಾಡು ಮುಖ್ಯಮಂತ್ರಿ’ ಎಂಬ ಹೊಸ ಟೈಟಲ್ ಕಾರ್ಡ್ ಕಾಣಿಸಿಕೊಳ್ಳಲಿದೆ. ಅಲ್ಲದೆ ವಿಜಯ್ ಅವರ ರಾಜಕೀಯ ಇಮೇಜ್ ಪ್ರತಿಬಿಂಬಿಸುವ ದೃಶ್ಯಗಳು, ಕೈಬೀಸುವ ಸಿಗ್ನೇಚರ್ ಶಾಟ್ ಹಾಗೂ ಪಕ್ಷಕ್ಕೆ ಸಂಬಂಧಿಸಿದ ಕೆಲವು ಉಲ್ಲೇಖಗಳನ್ನು ಹೊಸದಾಗಿ ಸೇರಿಸಲಾಗಿದೆ.
ಸಿಬಿಎಫ್ಸಿ ನಿರ್ದೇಶನದಂತೆ ಸುಮಾರು 20 ಸೆಕೆಂಡ್ ದೃಶ್ಯಗಳನ್ನು ಕತ್ತರಿಸಿ, 10 ಸೆಕೆಂಡ್ ಹೊಸ ದೃಶ್ಯಗಳನ್ನು ಸೇರಿಸಲಾಗಿದ್ದು, ಧಾರ್ಮಿಕ ಉಲ್ಲೇಖಗಳಿರುವ ಕೆಲವು ಪದಗಳನ್ನು ಮ್ಯೂಟ್ ಮಾಡಲಾಗಿದೆ.
ಎಚ್. ವಿನೋದ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ನರೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.



