ಗದಗ: ಹೊರಗುತ್ತಿಗೆ ಸಿಬ್ಬಂದಿಯ ವೇತನ ಬಿಡುಗಡೆ ಮಾಡಿಕೊಡುವುದಕ್ಕಾಗಿ ₹30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಮೊದಲ ಕಂತಿನ ₹15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಗದಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಎ. ಹಳ್ಳೂರು ಹಾಗೂ ಅವರ ಕಾರು ಚಾಲಕ ಮೌಲಾ ಹುಸೇನ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಟ್ರ್ಯಾಪ್ ಮಾಡಿ ವಶಕ್ಕೆ ಪಡೆದಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿಯಾಗಿರುವ ಅಭಿಷೇಕ ಅವರಿಂದ ವೇತನ ಬಿಡುಗಡೆ ಮಾಡಿಕೊಡುವ ನೆಪದಲ್ಲಿ ₹30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಮೊದಲ ಕಂತಾಗಿ ₹15 ಸಾವಿರ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಈ ಕಾರ್ಯಾಚರಣೆ ಲೋಕಾಯುಕ್ತ ಡಿಎಸ್ಪಿ ಲೋಕೇಶ್ ಅವರ ನೇತೃತ್ವದಲ್ಲಿ ನಡೆಯಿತು. ಸಿಪಿಐ ಪರಮೇಶ್, ಪಿಎಸ್‌ಐ ತೇಲಿ ಸೇರಿದಂತೆ ಆರು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

