HomeGadag NewsRDPR ವಿಶ್ವವಿದ್ಯಾಲಯದ ಟಾಪರ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಪೋಷಕರ...

RDPR ವಿಶ್ವವಿದ್ಯಾಲಯದ ಟಾಪರ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಪೋಷಕರ ಆರೋಪ

For Dai;y Updates Join Our whatsapp Group

ಗದಗ: ತಾಲೂಕಿನ ನಾಗಾವಿ ಸಮೀಪದ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ವಸತಿ ನಿಲಯದಲ್ಲಿ ಎಂ.ಪಿ.ಎಚ್. (ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್) ವ್ಯಾಸಂಗ ಮಾಡುತ್ತಿದ್ದ 24 ವರ್ಷದ ವೀಣಾ ಹಾನಾಪುರ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಿದ್ಯಾರ್ಥಿನಿಯ ಸಾವಿನ ಹಿಂದೆ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಮೂಡಿದ್ದು, ಪೋಷಕರು ಕೊಲೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಗದಗ ಗ್ರಾಮೀಣ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ನಿವಾಸಿ, ಶಿಕ್ಷಕರಾದ ರಾಮಪ್ಪ ಹಾಗೂ ಲಕ್ಷ್ಮೀ ದಂಪತಿ ಪುತ್ರಿಯಾಗಿರುವ ವೀಣಾ, ವಿಶ್ವವಿದ್ಯಾಲಯದ ವಸತಿ ನಿಲಯದ ಕೊಠಡಿಯಲ್ಲಿ ಡಬಲ್ ಬೆಡ್ ಕಾಟ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶವ ಮಂಡಿಯೂರಿದ ಸ್ಥಿತಿಯಲ್ಲಿದ್ದಲ್ಲದೆ, ಮುಖದ ಮೇಲೆ ಗಾಯದ ಗುರುತುಗಳು ಹಾಗೂ ಮೂಗಿನಲ್ಲಿ ರಕ್ತಸ್ರಾವ ಕಂಡುಬಂದಿರುವುದರಿಂದ ಇದು ಸಹಜ ಆತ್ಮಹತ್ಯೆಯಲ್ಲ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ವೀಣಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಎಲ್ಲ ಪರೀಕ್ಷೆಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದರು. ಓದಿನಲ್ಲೂ, ನಡವಳಿಕೆಯಲ್ಲೂ ಮಾದರಿಯಾಗಿದ್ದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಕಾರಣವಿರಲಿಲ್ಲ ಎಂದು ಪೋಷಕರು ಹೇಳಿದ್ದಾರೆ. ಯಾರೋ ಆಕೆಯ ಮೇಲೆ ಹಲ್ಲೆ ನಡೆಸಿ ಬಳಿಕ ನೇಣು ಹಾಕಿದ್ದಾರೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ತಮಗೆ ಮಾಹಿತಿ ನೀಡುವ ಮುನ್ನವೇ ವಿಶ್ವವಿದ್ಯಾಲಯದ ಸಿಬ್ಬಂದಿ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ವಿಶ್ವವಿದ್ಯಾಲಯದ ಅಧಿಕಾರಿಗಳ ನಡೆ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ “ನನ್ನ ಸಾವಿಗೆ ಯಾರೂ ಕಾರಣರಲ್ಲ” ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಅದು ವೀಣಾ ಅವರ ಕೈಬರಹವಲ್ಲ ಎಂದು ಪೋಷಕರು ಆರೋಪಿಸಿದ್ದು, ಡೆತ್‌ನೋಟ್‌ನ್ನೂ ಯಾರೋ ಸೃಷ್ಟಿಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಅಕೌಂಟ್ಸ್ ಅಧಿಕಾರಿ ಪ್ರಶಾಂತ್, ವೀಣಾ ಉತ್ತಮ ವಿದ್ಯಾರ್ಥಿನಿಯಾಗಿದ್ದು, ಶಿಕ್ಷಕರು ಹಾಗೂ ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆಕೆ ಏಕೆ ಈ ರೀತಿಯ ನಿರ್ಧಾರ ಕೈಗೊಂಡರು ಎಂಬುದು ತಿಳಿದಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯ ಪೋಷಕರು ಕೊಲೆ ಆರೋಪ ಮಾಡಿದ್ದು, ಮತ್ತೊಂದೆಡೆ ಡೆತ್‌ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಆತ್ಮಹತ್ಯೆಯೋ ಅಥವಾ ಬೇರೆ ಯಾವುದೇ ಕಾರಣವೋ ಎಂಬ ಎಲ್ಲ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ, ವಿಧಿವಿಜ್ಞಾನ ಪರೀಕ್ಷೆ ಹಾಗೂ ತನಿಖೆಯ ಬಳಿಕವೇ ವಿದ್ಯಾರ್ಥಿನಿಯ ಸಾವಿನ ನಿಖರ ಕಾರಣ ಬೆಳಕಿಗೆ ಬರಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img