ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯ ಪರಿಣಾಮ ಇದೀಗ ಕೃಷಿಯ ಜೊತೆಗೆ ಜಲವಿದ್ಯುತ್ ಉತ್ಪಾದನೆಯ ಮೇಲೂ ಗಂಭೀರ ಪರಿಣಾಮ ಬೀರಿದೆ.
ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಎಂಬ ಹೆಗ್ಗಳಿಕೆ ಹೊಂದಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ ಜಲವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ.
ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಳೆದ ಸುಮಾರು ಒಂದೂವರೆ ತಿಂಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಸಂಪೂರ್ಣ ನಿಲ್ಲಿಸಲಾಗಿದೆ.
ಕೆಆರ್‌ಎಸ್ ಅಥವಾ ಕಬಿನಿ ಜಲಾಶಯಗಳಿಂದ ನೀರು ಹರಿಸಿದಾಗ ಮಾತ್ರ ಶಿವನಸಮುದ್ರ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಸಾಧ್ಯವಾಗುತ್ತದೆ. ಇಲ್ಲಿ ಪ್ರತಿದಿನ ಸುಮಾರು 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಇದಕ್ಕಾಗಿ ದಿನಕ್ಕೆ 1,450 ಕ್ಯೂಸೆಕ್ ನೀರಿನ ಅವಶ್ಯಕತೆ ಇತ್ತು.
ಆದರೆ ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ನದಿಯಲ್ಲಿ ನೀರಿನ ಹರಿವು ಕುಸಿದಿದೆ. ಇದರಿಂದಾಗಿ ಜಲವಿದ್ಯುತ್ ಘಟಕದ ಕಾರ್ಯಾಚರಣೆ ಸ್ಥಗಿತಗೊಂಡಿದೆ.



