ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ರಸ್ತೆ ಅಪಘಾತದ ಬಳಿಕ ಇನ್ನೋವಾ ಹಾಗೂ ಸ್ವಿಫ್ಟ್ ಕಾರು ಚಾಲಕರ ನಡುವೆ ಸಿನಿಮಾ ಮಾದರಿಯ ಚೇಸಿಂಗ್ ನಡೆದಿದ್ದು, ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಇನ್ನೋವಾ ಕಾರು ಸ್ವಿಫ್ಟ್ ಕಾರಿಗೆ ಸ್ಪರ್ಶಿಸಿದ ಬಳಿಕ ಎರಡೂ ವಾಹನಗಳು ರಸ್ತೆ ಬದಿಯಲ್ಲಿ ನಿಂತಿದ್ದವು. ಈ ವೇಳೆ ಇನ್ನೋವಾ ಚಾಲಕ ಸ್ವಿಫ್ಟ್ ಕಾರಿನ ಕೀ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.
ತಕ್ಷಣ ಜಾಗೃತನಾದ ಸ್ವಿಫ್ಟ್ ಕಾರು ಚಾಲಕ, ಸ್ಥಳದಲ್ಲಿದ್ದ ಬೈಕ್ ಸವಾರನ ನೆರವು ಪಡೆದು ಇನ್ನೋವಾ ಕಾರನ್ನು ಬೆನ್ನಟ್ಟಿದ್ದಾರೆ. ಬಳಿಕ ಚಾಲಕನನ್ನು ತಡೆದು ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಿದ್ದಾರೆ.
ಆದರೆ, ಠಾಣೆಗೆ ಬರುವುದಾಗಿ ಹೇಳಿದ ಇನ್ನೋವಾ ಚಾಲಕ ಮತ್ತೆ ರ್ಯಾಶ್ ಡ್ರೈವಿಂಗ್ ಮಾಡುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಮತ್ತೊಮ್ಮೆ ಬೈಕ್ನಲ್ಲಿ ಬೆನ್ನಟ್ಟಿದ ಸ್ವಿಫ್ಟ್ ಚಾಲಕ, ಕೊನೆಗೂ ಇನ್ನೋವಾ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.



