HomeKarnataka Newsಪಾನ್ ಮಸಾಲಾ ಮೇಲಿನ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ʼಗೆ ಹೈಕೋರ್ಟ್ ಬ್ರೇಕ್!

ಪಾನ್ ಮಸಾಲಾ ಮೇಲಿನ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ʼಗೆ ಹೈಕೋರ್ಟ್ ಬ್ರೇಕ್!

For Dai;y Updates Join Our whatsapp Group

ಬೆಂಗಳೂರು: ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕೇಂದ್ರದ ಆದೇಶವನ್ನು ಅನೂರ್ಜಿತಗೊಳಿಸಿದೆ.

ಪಾನ್ ಮಸಾಲಾ ತಯಾರಕರಾದ ಧಾರಿವಾಲ್ ಇಂಡಸ್ಟ್ರೀಸ್ ಸೇರಿದಂತೆ ಹಲವು ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೋಮವಾರ ತೀರ್ಪು ಪ್ರಕಟಿಸಿತು.

ಕೇಂದ್ರ ಸರ್ಕಾರ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಿರುವ ಕ್ರಮ ಏಕಪಕ್ಷೀಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ, ತೆರಿಗೆ, ಸರ್‌ಚಾರ್ಜ್ ಅಥವಾ ಸೆಸ್ ವಿಧಿಸುವ ಅಧಿಕಾರ ಸಂಸತ್ತಿಗೆ ಇದೆ ಎಂಬುದನ್ನು ನ್ಯಾಯಾಲಯ ಸ್ಪಷ್ಟವಾಗಿ ಎತ್ತಿಹಿಡಿದಿದೆ.

2006ರ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕುರಿತು ತೀರ್ಪು ನೀಡಿದ ಹೈಕೋರ್ಟ್, ಸೆಸ್ ವಿಧಿಸುವ ಅಧಿಕಾರವನ್ನು ಪ್ರಶ್ನಿಸಲು ಅವಕಾಶವಿಲ್ಲ. ಆದರೆ ನಿಜವಾದ ಉತ್ಪಾದನೆಯ ಬದಲಿಗೆ ಊಹಿಸಲಾದ ಉತ್ಪಾದನೆಯ ಆಧಾರದ ಮೇಲೆ ಸೆಸ್ ವಿಧಿಸುವುದು ಸಂವಿಧಾನದ 14ನೇ ವಿಧಿಯ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದು ಹೇಳಿದೆ.

ಕೇಂದ್ರ ಸರ್ಕಾರಕ್ಕೆ ತೆರಿಗೆ ಅಥವಾ ಸೆಸ್ ವಿಧಿಸುವ ಸಂಪೂರ್ಣ ಅಧಿಕಾರವಿದ್ದರೂ, ಈ ಪ್ರಕರಣದಲ್ಲಿ ಅದನ್ನು ಜಾರಿಗೊಳಿಸಿರುವ ವಿಧಾನ ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ. ಕಾಯ್ದೆ ಮತ್ತು ಅದರ ನಿಯಮಗಳು ಸಮಾನತೆಯ ತತ್ವವನ್ನು ಉಲ್ಲಂಘಿಸುವಂತಿವೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಕಡಿಮೆ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಸಂಸ್ಥೆಗಳು ಮತ್ತು ಹೆಚ್ಚಿನ ಸಾಮರ್ಥ್ಯದ ಯಂತ್ರಗಳನ್ನು ಬಳಸುವ ಸಂಸ್ಥೆಗಳಿಗೆ ಒಂದೇ ರೀತಿಯ ಸೆಸ್ ವಿಧಿಸುವುದು ಸಮಂಜಸವಲ್ಲ. ಯಂತ್ರಗಳ ಊಹಾತ್ಮಕ ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ತೆರಿಗೆ ವಿಧಿಸುವುದು ಅನಿಯಂತ್ರಿತ ವರ್ಗೀಕರಣಕ್ಕೆ ಕಾರಣವಾಗುತ್ತದೆ. ಹೀಗಾಗಿ, ಪಾನ್ ಮಸಾಲಾ ಪೌಚ್ ಪ್ಯಾಕಿಂಗ್ ಯಂತ್ರಗಳ ಸಂಭಾವ್ಯ ಉತ್ಪಾದನೆ ಆಧರಿಸಿ ಸೆಸ್ ವಿಧಿಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆದಾಗ್ಯೂ, ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮಾಡಿದ ಅವಲೋಕನಗಳಿಗೆ ಅನುಗುಣವಾಗಿ ಸೆಸ್ ವಿಧಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸಲು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟಪಡಿಸಿದೆ.

ತೀರ್ಪಿನಲ್ಲಿ ಉದಾಹರಣೆಯೊಂದನ್ನು ಉಲ್ಲೇಖಿಸಿರುವ ನ್ಯಾಯಾಲಯ, ನಿಮಿಷಕ್ಕೆ 65 ಪೌಚ್ ಉತ್ಪಾದಿಸುವ ಸಾಮರ್ಥ್ಯದ ಯಂತ್ರವು ದಿನಕ್ಕೆ 8 ಗಂಟೆ ಕಾರ್ಯನಿರ್ವಹಿಸಿದರೆ 31,200 ಪೌಚ್ ಹಾಗೂ 25 ದಿನಗಳಲ್ಲಿ 7.80 ಲಕ್ಷ ಪೌಚ್ ಉತ್ಪಾದಿಸಬಹುದು. ಈ ಊಹಾತ್ಮಕ ಉತ್ಪಾದನೆ ಆಧರಿಸಿ ಸುಮಾರು ₹1.01 ಕೋಟಿ ಸೆಸ್ ಹಾಗೂ ಜಿಎಸ್‌ಟಿ ಸೇರಿ ಒಟ್ಟು ₹1.09 ಕೋಟಿ ತೆರಿಗೆ ವಿಧಿಸಲಾಗುತ್ತಿತ್ತು. ಈ ವಿಧಾನ ತಯಾರಕರ ಮೇಲೆ ಅಸಮಾನ ಮತ್ತು ಏಕಪಕ್ಷೀಯ ತೆರಿಗೆ ಹೊರೆ ಉಂಟುಮಾಡುತ್ತದೆ ಎಂದು ತಿಳಿಸಿದೆ.

ಸಾರ್ವಜನಿಕ ಆರೋಗ್ಯ ಹಾಗೂ ರಾಷ್ಟ್ರೀಯ ಭದ್ರತೆಗಾಗಿ ಹಣಕಾಸು ಸಂಗ್ರಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2025ರಲ್ಲಿ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾಯ್ದೆ ಜಾರಿಗೊಳಿಸಿತ್ತು. ಈ ಕಾಯ್ದೆಯಡಿ, ಪಾನ್ ಮಸಾಲಾ ಉತ್ಪಾದಕರ ಬಳಿ ಇರುವ ಯಂತ್ರಗಳ ಸಂಖ್ಯೆ ಹಾಗೂ ಅವುಗಳ ಸಂಭಾವ್ಯ ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ಸೆಸ್ ವಿಧಿಸಲಾಗುತ್ತಿತ್ತು.

ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ವಾದ ಮಂಡಿಸಿ, ಪಾನ್ ಮಸಾಲಾ ಉದ್ಯಮದಲ್ಲಿ ತೆರಿಗೆ ವಂಚನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆದಾಯ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆದರೆ ಹೈಕೋರ್ಟ್, ಸೆಸ್ ಜಾರಿಯ ವಿಧಾನ ಸಂವಿಧಾನಬದ್ಧವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಕೇಂದ್ರದ ಆದೇಶವನ್ನು ಅನೂರ್ಜಿತಗೊಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img