HomeKarnataka Newsಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಆರೋಪ: ಎರಡು ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಿ ಡಿಜಿಪಿ ಆದೇಶ

ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಆರೋಪ: ಎರಡು ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಿ ಡಿಜಿಪಿ ಆದೇಶ

For Dai;y Updates Join Our whatsapp Group

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.

ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಪಶುವೈದ್ಯ ಮಂಜುನಾಥ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಎಸ್. ಸಾಹುಕಾರ್ ಸೇರಿದಂತೆ ಇತರರ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು.

ಅಭ್ಯರ್ಥಿಗಳ ಆರೋಪವೇನು?

ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ 400 ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ ಇದೇ ವರ್ಷದ ಜನವರಿ 8 ಮತ್ತು 9ರಂದು ಪರೀಕ್ಷೆ ನಡೆಸಿದ್ದು, ಜುಲೈ 17ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು.

ಆಯ್ಕೆ ಪಟ್ಟಿಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಯ ಸಂಬಂಧಿಕರು ಉನ್ನತ ಶ್ರೇಣಿಯಲ್ಲಿ ಆಯ್ಕೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದ (UPSC) ಐಎಫ್‌ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೆಲವು ಅಭ್ಯರ್ಥಿಗಳಿಗೇ ಈ ಪರೀಕ್ಷೆಯಲ್ಲಿ 350 ಅಂಕಗಳಿಗಿಂತ ಕಡಿಮೆ ಅಂಕಗಳು ಬಂದಿದ್ದರೆ, ಶೈಕ್ಷಣಿಕವಾಗಿ ಸಾಧಾರಣ ಸಾಧನೆ ಮಾಡಿದ್ದ ಕೆಲ ಅಭ್ಯರ್ಥಿಗಳು 400ಕ್ಕೂ ಹೆಚ್ಚು ಅಂಕ ಗಳಿಸಿರುವುದು ಅಕ್ರಮದ ಅನುಮಾನ ಹುಟ್ಟಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಶಿವಶಂಕರಪ್ಪ ಸಾಹುಕಾರ್ ಅವರ ಸಂಬಂಧಿಕ ಅಭ್ಯರ್ಥಿಯೊಬ್ಬರು ಕಡಿಮೆ ಸಿಜಿಪಿಎಯೊಂದಿಗೆ ಪದವಿ ಪಡೆದಿದ್ದರೂ, ಕೆಪಿಎಸ್‌ಸಿ ಪರೀಕ್ಷೆಯಲ್ಲಿ 450ಕ್ಕೂ ಹೆಚ್ಚು ಅಂಕ ಗಳಿಸಿ ಉನ್ನತ ಸ್ಥಾನ ಪಡೆದಿರುವುದನ್ನೂ ಪ್ರಶ್ನಿಸಲಾಗಿದೆ.

ಪರೀಕ್ಷೆಗೆ ಆಯ್ಕೆಯಾದ ಕೆಲ ಅಭ್ಯರ್ಥಿಗಳ ಮೊಬೈಲ್‌ಗಳು ಪರೀಕ್ಷೆಯ ಹಿಂದಿನ ದಿನ ಹಾಗೂ ಪರೀಕ್ಷೆಯ ದಿನ ಸ್ವಿಚ್ ಆಫ್ ಆಗಿದ್ದವು ಎಂದು ದೂರಿನಲ್ಲಿ ಹೇಳಲಾಗಿದೆ.

ಮಧ್ಯವರ್ತಿಗಳು ಅಭ್ಯರ್ಥಿಗಳನ್ನು ವಾಹನಗಳಲ್ಲಿ ಹೊರರಾಜ್ಯ ಅಥವಾ ಇತರೆ ಸ್ಥಳಗಳ ಹೋಟೆಲ್ ಹಾಗೂ ರೆಸಾರ್ಟ್‌ಗಳಿಗೆ ಕರೆದೊಯ್ದು, ಅಲ್ಲಿ ಉತ್ತರಗಳಿರುವ ಪ್ರಶ್ನೆಪತ್ರಿಕೆ ನೀಡಿ ತರಬೇತಿ ನೀಡಿ ಬಳಿಕ ಪರೀಕ್ಷಾ ಕೇಂದ್ರಕ್ಕೆ ಕರೆತಂದಿರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.

ಹೀಗಾಗಿ ಅಭ್ಯರ್ಥಿಗಳು ಪರೀಕ್ಷೆಗೆ ಮುನ್ನ ಯಾವ ಸ್ಥಳದಲ್ಲಿದ್ದರು ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.

ಕೆಲ ಅಭ್ಯರ್ಥಿಗಳು ಒಎಂಆರ್ ಉತ್ತರ ಪತ್ರಿಕೆಯಲ್ಲಿ ಕೆಲವೇ ಪ್ರಶ್ನೆಗಳಿಗೆ ಉತ್ತರಿಸಿ ಉಳಿದ ಪ್ರಶ್ನೆಗಳನ್ನು ಖಾಲಿ ಬಿಟ್ಟಿದ್ದರೂ, ಹೆಚ್ಚಿನ ಅಂಕ ಪಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಕೇಳಲಾಗಿದ್ದು, ಅವು ಲಭ್ಯವಾದ ಬಳಿಕ ತನಿಖೆಗೆ ಸಲ್ಲಿಸಲಾಗುವುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಎಂಆರ್ ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿರುವ ಶಂಕೆ ವ್ಯಕ್ತಪಡಿಸಿರುವ ದೂರುದಾರರು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಅಕ್ರಮದ ಸತ್ಯಾಸತ್ಯತೆ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.

ದೂರಿನ ಪ್ರಕಾರ, ಮಧ್ಯವರ್ತಿಗಳು ಕೆಲ ಅಭ್ಯರ್ಥಿಗಳಿಗೆ ಕರೆ ಮಾಡಿ, ಅವರ ಒಎಂಆರ್ ಅಂಕಗಳ ಮಾಹಿತಿಯನ್ನು ತಿಳಿಸಿ, ಆಯ್ಕೆ ಪಟ್ಟಿಗೆ ಸೇರಿಸಲು ಸುಮಾರು ₹80 ಲಕ್ಷ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಮೊದಲು ₹40 ಲಕ್ಷ ಮುಂಗಡವಾಗಿ ನೀಡಿ, ಉದ್ಯೋಗ ಖಚಿತವಾದ ಬಳಿಕ ಉಳಿದ ಹಣ ಪಾವತಿಸುವಂತೆ ಸೂಚಿಸಿದ್ದರೆಂದು ಆರೋಪಿಸಲಾಗಿದೆ. ಈ ಸಂಬಂಧ ವಿಡಿಯೊ ಮತ್ತು ಆಡಿಯೊ ದಾಖಲೆಗಳೂ ಲಭ್ಯವಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಭ್ಯರ್ಥಿಗಳ ವೈಯಕ್ತಿಕ ಮಾಹಿತಿ ಹಾಗೂ ಒಎಂಆರ್ ಅಂಕಗಳ ವಿವರಗಳು ಮಧ್ಯವರ್ತಿಗಳ ಕೈಗೆ ಹೇಗೆ ತಲುಪಿದವು ಎಂಬುದರ ಹಿಂದೆ ಕೆಪಿಎಸ್‌ಸಿಯ ಹಿಂದಿನ ಅಧ್ಯಕ್ಷರು, ಸದಸ್ಯರು ಮತ್ತು ಕೆಲ ಅಧಿಕಾರಿಗಳ ಪಾತ್ರ ಇರುವ ಸಾಧ್ಯತೆಯಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರುದಾರರು ಒತ್ತಾಯಿಸಿದ್ದಾರೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಎರಡೂ ಪ್ರಕರಣಗಳನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದು, ಅಕ್ರಮದ ಹಿಂದಿರುವವರ ಪಾತ್ರದ ಬಗ್ಗೆ ಸಿಐಡಿ ಸಮಗ್ರ ತನಿಖೆ ನಡೆಸಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img