HomeGadag Newsಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ, ಅದು ಸಾಮಾಜಿಕ ಜವಾಬ್ದಾರಿ: ಅರುಣ ಕುಲಕರ್ಣಿ

ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ, ಅದು ಸಾಮಾಜಿಕ ಜವಾಬ್ದಾರಿ: ಅರುಣ ಕುಲಕರ್ಣಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ, ಅದು ಸಮಾಜದ ಮೇಲಿನ ಮಹತ್ತರ ಜವಾಬ್ದಾರಿಯಾಗಿದೆ. ಪತ್ರಕರ್ತರು ಸತ್ಯ, ನಿಷ್ಪಕ್ಷಪಾತ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಂಡು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹಿರಿಯ ಪತ್ರಕರ್ತ ಅರುಣ ಕುಲಕರ್ಣಿ ಹೇಳಿದರು.

ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹಿರೆಅಳಗುಂಡಿಯ ಚನ್ನು ಪಾಟೀಲ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ 1843ರ ಜುಲೈ 1ರಂದು ಮಂಗಳೂರಿನಲ್ಲಿ ಪ್ರಕಟವಾಗಿದ್ದು, ಅದರ ಸ್ಮರಣಾರ್ಥವಾಗಿ ಪ್ರತಿ ವರ್ಷ ಜುಲೈ 1ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆಯನ್ನು ಹರ್ಮನ್ ಮೊಗ್ಲಿಂಗ್ ಆರಂಭಿಸಿದ್ದರು ಎಂದು ಅವರು ತಿಳಿಸಿದರು.

ಪತ್ರಿಕಾ ದಿನಾಚರಣೆಯ ಉದ್ದೇಶ ಪತ್ರಕರ್ತರ ಸೇವೆಯನ್ನು ಗೌರವಿಸುವುದು, ಪತ್ರಿಕೋದ್ಯಮದ ಇತಿಹಾಸವನ್ನು ಸ್ಮರಿಸುವುದು ಹಾಗೂ ಸತ್ಯನಿಷ್ಠ, ನಿಷ್ಪಕ್ಷಪಾತ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಾಗಿದೆ ಎಂದು ಹೇಳಿದರು.

ಪತ್ರಕರ್ತರು ಸತ್ಯ ಮತ್ತು ನಿಖರತೆ, ನಿಷ್ಪಕ್ಷಪಾತತೆ, ಸಾಮಾಜಿಕ ಹೊಣೆಗಾರಿಕೆ, ಜನರ ಧ್ವನಿಗೆ ಧ್ವನಿಯಾಗುವುದು, ಸುಳ್ಳು ಸುದ್ದಿಯಿಂದ ದೂರವಿರುವುದು, ನೈತಿಕತೆ, ಗೌಪ್ಯತೆ, ಕಾನೂನಿಗೆ ಗೌರವ ಹಾಗೂ ಸಂವೇದನಾಶೀಲ ವರದಿಗಾರಿಕೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ 15 ರಾಜ್ಯಮಟ್ಟದ ದಿನಪತ್ರಿಕೆಗಳು ಹಾಗೂ 200ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ನಿಂಗರಾಜ ಬೇವಿನಕಟ್ಟಿ ಮಾತನಾಡಿ, ಸೈನಿಕರು ದೇಶದ ನಿಜವಾದ ಹೀರೋಗಳಾಗಿದ್ದು, ಅವರ ತ್ಯಾಗ ಮತ್ತು ಸೇವೆಯಿಂದಲೇ ದೇಶದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು.

ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಮಾತನಾಡಿ, ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ತಮ್ಮನ್ನು ಸನ್ಮಾನಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುತ್ತಣ್ಣ ಪಲ್ಲೇದ ಮಾತನಾಡಿ, ಪತ್ರಕರ್ತರು ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಪತ್ರಿಕಾ ದಿನಾಚರಣೆಯೊಂದಿಗೆ ನಿವೃತ್ತ ಸೈನಿಕರನ್ನು ಗೌರವಿಸಿರುವುದು ಚನ್ನು ಪಾಟೀಲ ಫೌಂಡೇಷನ್‌ನ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಬ್ರಹ್ಮಕುಮಾರಿ ಸವಿತಕ್ಕ ಮಾತನಾಡಿ, ಪರೋಪಕಾರದ ಗುಣದಿಂದ ಜೀವನ ಸಾರ್ಥಕವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮಕ್ಕೆ ತಮ್ಮ ಸಂಸ್ಥೆ ಸಾಕ್ಷಿಯಾಗಿರುವುದು ಸಂತಸದ ಸಂಗತಿ ಎಂದರು.

ವೇದಿಕೆಯಲ್ಲಿ ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಶರಣಪ್ಪ ನಾಶಿಪುಡಿ ಉಪಸ್ಥಿತರಿದ್ದರು.

ಚನ್ನು ಪಾಟೀಲ ಫೌಂಡೇಷನ್‌ನ ಸಂಸ್ಥಾಪಕ ಉಮೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಶಿವಕುಮಾರ ದಡ್ಡೂರ ಕಾರ್ಯಕ್ರಮ ನಿರೂಪಿಸಿದರು. ಉಮೇಶ ಪಾಟೀಲ ಸ್ವಾಗತಿಸಿದರು.

“ಪತ್ರಿಕೋದ್ಯಮ ಕೇವಲ ವೃತ್ತಿಯಲ್ಲ; ಅದು ಸಮಾಜದ ಮೇಲಿನ ಜವಾಬ್ದಾರಿ. ಸತ್ಯ, ನಿಷ್ಪಕ್ಷಪಾತ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಂಡು ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸಬೇಕು.”

– ಅರುಣ ಕುಲಕರ್ಣಿ, ಹಿರಿಯ ಪತ್ರಕರ್ತ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img