HomeGadag Newsಗುರುಭಕ್ತಿ, ನಾಮಸ್ಮರಣೆ ಬದುಕಿನ ನಿಜವಾದ ದಾರಿ: ಡಾ. ಎಸ್.ಬಿ. ಶೆಟ್ಟರ

ಗುರುಭಕ್ತಿ, ನಾಮಸ್ಮರಣೆ ಬದುಕಿನ ನಿಜವಾದ ದಾರಿ: ಡಾ. ಎಸ್.ಬಿ. ಶೆಟ್ಟರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಗುರುನಲ್ಲಿ ಸಂಪೂರ್ಣ ಶರಣಾಗತಿ, ನಿರಂತರ ನಾಮಸ್ಮರಣೆ ಹಾಗೂ ಆತ್ಮಜ್ಞಾನವೇ ಮನುಷ್ಯನ ಬದುಕಿನ ನಿಜವಾದ ದಾರಿಯಾಗಿದೆ. ಕಾಯ, ವಾಚ, ಮನಸ್ಸಿನ ತ್ರಿಕರಣ ಶುದ್ಧಿಯೊಂದಿಗೆ ಪರಮಾತ್ಮನ ನಾಮಸ್ಮರಣೆ ಮಾಡಿದಾಗ ಮಾತ್ರ ಮಾಯೆಯನ್ನು ಜಯಿಸಲು ಸಾಧ್ಯ ಎಂದು ಚಿಂತಕ ಹಾಗೂ ವೈದ್ಯ ಡಾ. ಎಸ್.ಬಿ. ಶೆಟ್ಟರ ಹೇಳಿದರು.

ಗುರುಪೂರ್ಣಿಮೆ ಅಂಗವಾಗಿ ಗದಗ-ಬೆಟಗೇರಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ವತಿಯಿಂದ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಶ್ರೀ ಸಾಯಿ ಸಚ್ಚರಿತ್ರೆ’ ಪ್ರವಚನ ಮಾಲಿಕೆ-8ರಲ್ಲಿ ಅವರು ಮಾತನಾಡಿದರು.

ಭಕ್ತಿ, ತಾಳ್ಮೆ ಹಾಗೂ ಸಂಪೂರ್ಣ ಶರಣಾಗತಿ ಹೊಂದಿದವರನ್ನು ಸದ್ಗುರು ಎಂದಿಗೂ ಕೈಬಿಡುವುದಿಲ್ಲ. ಸಂಕಷ್ಟಗಳು ಎಷ್ಟೇ ದೊಡ್ಡದಾಗಿದ್ದರೂ ಗುರುಕೃಪೆಯಿಂದ ಅವು ದೂರವಾಗುತ್ತವೆ. ಸಾಯಿಬಾಬಾರ ಲೀಲೆಗಳು ಭಕ್ತರಲ್ಲಿ ಆತ್ಮವಿಶ್ವಾಸ, ನಂಬಿಕೆ ಹಾಗೂ ಸತ್ಸಂಕಲ್ಪವನ್ನು ಬೆಳೆಸುತ್ತವೆ ಎಂದು ಹೇಳಿದರು.

ಸಾಯಿಬಾಬಾರವರು ತಮ್ಮ ಮಹಾಸಮಾಧಿಯ ಸಮಯವನ್ನು ಮುಂಚಿತವಾಗಿಯೇ ಸೂಚಿಸಿದ್ದರು. ವಿಜಯದಶಮಿಯಂದು ಲಕ್ಷ್ಮೀಬಾಯಿಗೆ ಒಂಬತ್ತು ರೂಪಾಯಿಗಳನ್ನು ದಕ್ಷಿಣೆಯಾಗಿ ನೀಡಿ ನವವಿಧ ಭಕ್ತಿಯ ಸಂದೇಶ ಸಾರಿದ ಅವರು, ಬಳಿಕ ತಮ್ಮ ದೇಹವನ್ನು ಬೂಟಿವಾಡಾದಲ್ಲಿ ಸಮಾಧಿ ಮಾಡುವಂತೆ ಭಕ್ತರಿಗೆ ಸೂಚಿಸಿದ್ದರು ಎಂದು ವಿವರಿಸಿದರು.

ಬಾಬಾರವರ ದೇಹತ್ಯಾಗದ ಸಂದರ್ಭದಲ್ಲಿ ಅವರ ದೇಹದಿಂದ ಹೊರಹೊಮ್ಮಿದ ಜ್ಯೋತಿ ನಾಲ್ಕು ಭಾಗಗಳಾಗಿ ವಿಭಜನೆಗೊಂಡು ಗುರುಸ್ಥಾನ, ದ್ವಾರಕಾಮಾಯಿ, ಚಾವಡಿ ಹಾಗೂ ಬೂಟಿವಾಡಾಕ್ಕೆ ತೆರಳಿದೆಯೆಂಬ ಪರಂಪರಾಗತ ನಂಬಿಕೆಯನ್ನು ಉಲ್ಲೇಖಿಸಿದ ಅವರು, ಇಂದಿಗೂ ಈ ನಾಲ್ಕು ಪವಿತ್ರ ಸ್ಥಳಗಳಲ್ಲಿ ಬಾಬಾರವರ ಸಾನ್ನಿಧ್ಯವನ್ನು ಭಕ್ತರು ಅನುಭವಿಸುತ್ತಿದ್ದಾರೆ ಎಂದರು.

ಭಕ್ತನ ಶ್ರದ್ಧೆ ಮತ್ತು ನಂಬಿಕೆಯ ಮೇಲೆಯೇ ಸಾಯಿಬಾಬಾರವರ ಅನುಗ್ರಹ ಅವಲಂಬಿತವಾಗಿದೆ. ಗುರುವಿನ ಮೇಲೆ ಅಚಲ ವಿಶ್ವಾಸ ಹೊಂದಿದವರಿಗೆ ದೈವಾನುಗ್ರಹ ದೊರೆಯುತ್ತದೆ ಎಂದು ಹೇಳಿದ ಅವರು, ಸಂತಾನ ಭಾಗ್ಯವಿಲ್ಲದ ದಂಪತಿಗೆ ಸಾಯಿಬಾಬಾರವರು ಆಶೀರ್ವದಿಸಿದ ಸಚ್ಚರಿತ್ರೆಯ ಪ್ರಸಂಗವನ್ನು ಉದಾಹರಿಸಿದರು.

ಪ್ರವಚನದ ಅಂತ್ಯದಲ್ಲಿ ಆದಿ ಶಂಕರಾಚಾರ್ಯರ ನಿರ್ವಾಣ ಷಟ್ಕ ಶ್ಲೋಕಗಳನ್ನು ಉಲ್ಲೇಖಿಸಿ, “ನಾನು ಯಾರು?” ಎಂಬ ಆತ್ಮವಿಚಾರವೇ ಆತ್ಮಸಾಕ್ಷಾತ್ಕಾರಕ್ಕೆ ದಾರಿಯಾಗಿದೆ. ದೇಹ ನಶ್ವರವಾದರೂ ಆತ್ಮ ಶಾಶ್ವತವಾಗಿದ್ದು, ಭಕ್ತಿ, ಪ್ರೀತಿ, ಧ್ಯಾನ, ವೈರಾಗ್ಯ ಹಾಗೂ ಆತ್ಮಜ್ಞಾನವೇ ಆಧ್ಯಾತ್ಮಿಕ ಬದುಕಿನ ಮೂಲಾಧಾರಗಳಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಸಾದದ ಭಕ್ತಿ ಸೇವೆ ಸಲ್ಲಿಸಿದ ಡಾ. ನಿರಜ ಶೆಟ್ಟರ, ಡಾ. ಎಸ್.ಡಿ. ಯರಗೇರಿ, ರುದ್ರಪ್ಪ ಅರಳಿ, ಚೇತನ ಧನ್ನೂರಹಿರೇಮಠ, ಗಂಗಾಧರ ಅಬ್ಬಿಗೇರಿ, ಮಲ್ಲಿಕಾರ್ಜುನ ಸರ್ವಿ, ಪೂಜಾ ಗೌರಿಪುರ, ವಿಜಯಮಹಾಂತೇಶ ಕೋಟಿ, ಗಾಯತ್ರಿ ಕಾತರಕಿ, ಬಸವರಾಜ ಚಿನ್ನಾಪೂರ ಹಾಗೂ ರತ್ನಾ ಮುಗಳಿ ಅವರನ್ನು ಸನ್ಮಾನಿಸಲಾಯಿತು.

ಮಹೇಶಗೌಡ ತಲೆಗೌಡ್ರ ಸ್ವಾಗತಿಸಿದರು. ಸದಾಶಿವಪ್ಪ ವಾಲಿ ವಂದಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಇಂದು ಗುರುಪೂರ್ಣಿಮೆ ವಿಶೇಷ ಆಚರಣೆ

ಜುಲೈ 29ರಂದು ಗುರುಪೂರ್ಣಿಮೆ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಕಾಕಡ ಆರತಿ, ಬಳಿಕ ಮಂಗಳಸ್ನಾನ, ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪಂಚಾರತಿ, ಪುಷ್ಪಾರ್ಚನೆ ಹಾಗೂ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸೂರ್ಯಾಸ್ತದ ಬಳಿಕ ಧೂಪಾರತಿ, ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ 10 ಗಂಟೆಗೆ ಶೇಜಾರತಿ ನಡೆಯಲಿದೆ.

“ಗುರುನಲ್ಲಿ ಸಂಪೂರ್ಣ ಶರಣಾಗತಿ, ನಿರಂತರ ನಾಮಸ್ಮರಣೆ ಮತ್ತು ಆತ್ಮಜ್ಞಾನವೇ ಮನುಷ್ಯನ ಬದುಕಿನ ನಿಜವಾದ ದಾರಿ.”

– ಡಾ. ಎಸ್.ಬಿ. ಶೆಟ್ಟರ, ಚಿಂತಕ ಹಾಗೂ ವೈದ್ಯ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img