ಬೆಂಗಳೂರು: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಮೊದಲಿಗೆ ತಲೆಯಿಲ್ಲದ ಮೃತದೇಹ ಮಾತ್ರ ಪತ್ತೆಯಾಗಿದ್ದರೆ, ಇದೀಗ ಘಟನೆಯ ಮರುದಿನ ರುಂಡು ಸುಮಾರು 400 ಮೀಟರ್ ದೂರದ ಮೈದಾನದಲ್ಲಿ ಪತ್ತೆಯಾಗಿದೆ. ಮೃತನನ್ನು ಆಂಧ್ರ ಪ್ರದೇಶ ಮೂಲದ 28 ವರ್ಷದ ವಿಶ್ವನಾಥ್ ಎಂದು ಗುರುತಿಸಲಾಗಿದೆ.
ಆರಂಭದಲ್ಲಿ ತಲೆಯಿಲ್ಲದ ಮೃತದೇಹ ಮಾತ್ರ ಪತ್ತೆಯಾಗಿದ್ದರಿಂದ ರೈಲ್ವೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಮಂಗಳವಾರ ಸ್ಥಳೀಯರು ಮೈದಾನದಲ್ಲಿ ಮಾನವ ತಲೆ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಆತ್ಮಹತ್ಯೆ ಮಾಡಿಕೊಂಡಿದ್ದ ವಿಶ್ವನಾಥ್ ಅವರ ರುಂಡು ಎಂಬುದು ದೃಢಪಟ್ಟಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ರೈಲಿಗೆ ತಲೆಕೊಟ್ಟ ಪರಿಣಾಮ ದೇಹ ಮತ್ತು ರುಂಡು ಬೇರ್ಪಟ್ಟಿದ್ದು, ಬಳಿಕ ನಾಯಿಗಳು ರುಂಡನ್ನು ಸುಮಾರು 400 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದ್ದವು ಎಂದು ಶಂಕಿಸಲಾಗಿದೆ. ಪತ್ತೆಯಾದ ರುಂಡನ್ನು ವರ್ತೂರು ಪೊಲೀಸರು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.
ಇದೇ ವೇಳೆ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಆತ್ಮಹತ್ಯೆಗೆ ಮುನ್ನ ವಿಶ್ವನಾಥ್ ತಮ್ಮ ಪ್ರೇಯಸಿಗೆ ಕರೆ ಮಾಡಿ ಮಾತನಾಡಿದ್ದರು. ಆ ಮಾತುಕತೆಯ ಬಳಿಕವೇ ಅವರು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಜೀವ ಅಂತ್ಯಗೊಳಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಗೆ ನಿಖರ ಕಾರಣ ಏನು? ಪ್ರೇಮ ವೈಫಲ್ಯವೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಕುರಿತು ರೈಲ್ವೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



