ನವದೆಹಲಿ: ಗುರು ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ. ಗುರುಗಳು ಕೇವಲ ಅಕ್ಷರ ಜ್ಞಾನ ನೀಡುವವರಲ್ಲ, ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಶಕ್ತಿ, ಉತ್ತಮ ಚಿಂತನೆ ಹಾಗೂ ಮೌಲ್ಯಗಳನ್ನು ಬೆಳೆಸಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಶಕ್ತಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಗುರುವಿನ ಮಹತ್ವವನ್ನು ವಿವರಿಸುವ ಸಂಸ್ಕೃತ ಸುಭಾಷಿತವೊಂದನ್ನು ಉಲ್ಲೇಖಿಸಿದ್ದಾರೆ.
“ಪ್ರೇರಕಃ ಸೂಚಕಶ್ಚೈವ ವಾಚಕೋ ದರ್ಶಕಸ್ತಥಾ। ಶಿಕ್ಷಕಃ ಬೋಧಕಶ್ಚೈವ ಷಡೇತೇ ಗುರವಃ ಸ್ಮೃತಾಃ”
ಈ ಶ್ಲೋಕದ ಅರ್ಥವನ್ನು ವಿವರಿಸಿರುವ ಪ್ರಧಾನಿ, ಪ್ರೇರಕ ಪ್ರೇರಣೆ ನೀಡುವವನು, ಸೂಚಕ ಸರಿಯಾದ ದಾರಿಯನ್ನು ತೋರಿಸುವವನು, ವಾಚಕ ಜ್ಞಾನವನ್ನು ಹಂಚುವವನು, ದರ್ಶಕ ಸನ್ಮಾರ್ಗದತ್ತ ಮುನ್ನಡೆಸುವವನು, ಶಿಕ್ಷಕ ವಿದ್ಯೆ ಮತ್ತು ಕೌಶಲ್ಯ ಬೋಧಿಸುವವನು ಹಾಗೂ ಬೋಧಕ ಜೀವನದ ಸತ್ಯವನ್ನು ಅರಿವಿಗೆ ತರುವವನು ಎಂದು ಹೇಳಿದ್ದಾರೆ. ಈ ಆರು ರೂಪಗಳೂ ಗುರುವಿನ ಶ್ರೇಷ್ಠ ಸ್ವರೂಪಗಳೆಂದು ಸ್ಮರಿಸಿದ್ದಾರೆ.
ಪ್ರಧಾನಿ ತಮ್ಮ ಸಂದೇಶದಲ್ಲಿ, “ಗುರುವು ಜ್ಞಾನ ಧಾರೆ ಎರೆಯುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತಾರೆ. ಸದುಲೋಚನೆ ಹಾಗೂ ಸಂಸ್ಕಾರಗಳೊಂದಿಗೆ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸುತ್ತಾರೆ. ಅಂತಹ ಮಹಾನ್ ಗುರುಗಳ ಆದರ್ಶಗಳನ್ನು ನಮ್ಮ ಬದುಕಿನ ದಾರಿದೀಪವನ್ನಾಗಿ ಮಾಡಿಕೊಳ್ಳೋಣ” ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.



