ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಫೀಲ್ಡಿಂಗ್ ವಿಭಾಗಕ್ಕೆ ಹೊಸ ಸಾರಥಿ ಸಿಕ್ಕಿದ್ದಾರೆ. ಟಿ. ದಿಲೀಪ್ ಅವರ ಒಪ್ಪಂದವನ್ನು ನವೀಕರಿಸದಿರಲು ಬಿಸಿಸಿಐ ನಿರ್ಧರಿಸಿದ ಬೆನ್ನಲ್ಲೇ, ಅನುಭವಿ ಕೋಚ್ ಸುಭದೀಪ್ ಘೋಷ್ ಅವರನ್ನು ಟೀಮ್ ಇಂಡಿಯಾದ ಹೊಸ ಫೀಲ್ಡಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಗೌತಮ್ ಗಂಭೀರ್ ನೇತೃತ್ವದ ಕೋಚಿಂಗ್ ತಂಡದಲ್ಲಿ ಸೇರ್ಪಡೆಯಾಗಿರುವ ಘೋಷ್, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದಲೇ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕ್ರಿಕೆಟ್ ವಲಯದಲ್ಲಿ ‘ಜಾಯ್’ ಎಂದೇ ಪರಿಚಿತರಾಗಿರುವ ಸುಭದೀಪ್ ಘೋಷ್, ಅಸ್ಸಾಂ ಹಾಗೂ ರೈಲ್ವೇಸ್ ಪರ ದೇಶೀಯ ಕ್ರಿಕೆಟ್ ಆಡಿದ್ದರು. ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಆಫ್ ಸ್ಪಿನ್ನರ್ ಆಗಿದ್ದ ಅವರು, ತಮ್ಮ ಚುರುಕಿನ ಫೀಲ್ಡಿಂಗ್ನಿಂದ ವಿಶೇಷ ಗುರುತಿಸಿಕೊಂಡಿದ್ದರು. 17 ಪ್ರಥಮ ದರ್ಜೆ ಮತ್ತು 17 ಲಿಸ್ಟ್-ಎ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು.
ಆಟಗಾರನಾಗಿ ನಿವೃತ್ತಿಯಾದ ಬಳಿಕ ಬಿಸಿಸಿಐ ತರಬೇತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದ ಘೋಷ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಈಗಿನ ಸೆಂಟರ್ ಆಫ್ ಎಕ್ಸಲೆನ್ಸ್)ಯಲ್ಲಿ ಕಳೆದ ಹಲವು ವರ್ಷಗಳಿಂದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2024ರ ಅಂಡರ್-19 ವಿಶ್ವಕಪ್ನಲ್ಲಿ ರನ್ನರ್ಅಪ್ ಆದ ಭಾರತ ತಂಡ, ಇಂಡಿಯಾ-ಎ ತಂಡಗಳು ಹಾಗೂ ಭಾರತೀಯ ಮಹಿಳಾ ತಂಡದೊಂದಿಗೆ ಅವರು ಕೆಲಸ ಮಾಡಿದ್ದರು.
2023ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಪುರುಷರ ತಂಡದ ಕೋಚಿಂಗ್ ಸಿಬ್ಬಂದಿಯಲ್ಲೂ ಅವರು ಸ್ಥಾನ ಪಡೆದಿದ್ದರು. ಇತ್ತೀಚೆಗೆ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತೀಯ ಯುವ ತಂಡಕ್ಕೂ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಐಪಿಎಲ್ನಲ್ಲೂ ಅಪಾರ ಅನುಭವ ಹೊಂದಿರುವ ಸುಭದೀಪ್ ಘೋಷ್, 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪ್ರಶಸ್ತಿ ಗೆದ್ದಾಗ ಕೋಚಿಂಗ್ ಸಿಬ್ಬಂದಿಯಲ್ಲಿದ್ದರು. ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೂ ಕೆಲಸ ಮಾಡಿದ್ದರು. ಈಗ ಟೀಮ್ ಇಂಡಿಯಾದ ಫೀಲ್ಡಿಂಗ್ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಅವರ ಹೆಗಲೇರಿದೆ.



