ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ 10,000 ಮೀಟರ್ ಓಟದಲ್ಲಿ ಗುಲ್ವೀರ್ ಸಿಂಗ್ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಹೊಸ ಇತಿಹಾಸ ಬರೆದರೆ, ಮಹಿಳೆಯರ 69 ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಹರ್ಜಿಂದರ್ ಕೌರ್ ರಜತ ಪದಕ ಗೆದ್ದು ಭಾರತದ ಪದಕ ಪಟ್ಟಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.
ಸ್ಕಾಟ್ನ್ ಕ್ರೀಡಾಂಗಣದಲ್ಲಿ ಭಾರೀ ಮಳೆ ಹಾಗೂ ನೀರು ತುಂಬಿದ ಟ್ರ್ಯಾಕ್ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಗುಲ್ವೀರ್ ಸಿಂಗ್, ಆರಂಭದಿಂದ ಅಂತ್ಯದವರೆಗೆ ಪದಕದ ಪೈಪೋಟಿಯಲ್ಲಿ ಉಳಿದರು. 27 ನಿಮಿಷ 49.78 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. 27 ನಿಮಿಷ 48.93 ಸೆಕೆಂಡುಗಳಲ್ಲಿ ಗುರಿ ತಲುಪಿದ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಚಿನ್ನ ಗೆದ್ದರೆ, ಡೇವಿಡ್ ಮುಲ್ಲಾರ್ಕಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಈ ಸಾಧನೆಯೊಂದಿಗೆ ಕಾಮನ್ವೆಲ್ತ್ ಗೇಮ್ಸ್ನ ಪುರುಷರ 10,000 ಮೀಟರ್ ಓಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಐತಿಹಾಸಿಕ ಹೆಗ್ಗಳಿಕೆ ಗುಲ್ವೀರ್ ಸಿಂಗ್ ಪಾಲಾಯಿತು.
ಇನ್ನೊಂದೆಡೆ ಮಹಿಳೆಯರ 69 ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಹರ್ಜಿಂದರ್ ಕೌರ್ ಬೆಳ್ಳಿ ಪದಕ ಗೆದ್ದು ಮಿಂಚಿದರು. 2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ 71 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಕೌರ್, ಈ ಬಾರಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ರಜತ ಪದಕ ಜಯಿಸಿದರು. ಕೆನಡಾದ ಶಾರ್ಲೆಟ್ ಸಿಮೋನ್ಯು ಚಿನ್ನದ ಪದಕ ಗೆದ್ದರು.
ಹರ್ಜಿಂದರ್ ಕೌರ್ ಅವರ ಸಾಧನೆಯೊಂದಿಗೆ ವೇಟ್ಲಿಫ್ಟಿಂಗ್ನಲ್ಲಿ ಭಾರತದ ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮತ್ತಷ್ಟು ವೇಗ ಪಡೆದಿದೆ.



