HomeKarnataka Newsಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಟ್ವಿಸ್ಟ್: ಕೊನೆಗೂ DNA ಪರೀಕ್ಷೆಯಲ್ಲಿ ಬಯಲಾಯ್ತು ಮೂರು ಅಸ್ಥಿಪಂಜರಗಳ ರಹಸ್ಯ!

ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಟ್ವಿಸ್ಟ್: ಕೊನೆಗೂ DNA ಪರೀಕ್ಷೆಯಲ್ಲಿ ಬಯಲಾಯ್ತು ಮೂರು ಅಸ್ಥಿಪಂಜರಗಳ ರಹಸ್ಯ!

For Dai;y Updates Join Our whatsapp Group

ಮಂಗಳೂರು: ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಉತ್ಖನನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಗ್ಲೆಗುಡ್ಡೆಯಲ್ಲಿ ಎಸ್‌ಐಟಿ ಪತ್ತೆಹಚ್ಚಿದ್ದ ಅಸ್ಥಿಪಂಜರಗಳ ಪೈಕಿ ಮೂರು ಅಸ್ಥಿಪಂಜರಗಳ ಗುರುತು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಎಸ್‌ಐಟಿ ಅಧಿಕಾರಿಗಳು ಸಂಬಂಧಿತ ಕುಟುಂಬಸ್ಥರಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಅಸ್ಥಿಪಂಜರಗಳ ಮಾದರಿಗಳೊಂದಿಗೆ ಹೋಲಿಕೆ ನಡೆಸಿದ್ದರು. ಈ ಪರೀಕ್ಷೆಯಲ್ಲಿ ಮೂರು ಅಸ್ಥಿಪಂಜರಗಳ ಡಿಎನ್‌ಎ ಕುಟುಂಬಸ್ಥರ ಮಾದರಿಗಳೊಂದಿಗೆ ಹೊಂದಾಣಿಕೆಯಾಗಿರುವುದು ದೃಢಪಟ್ಟಿದೆ.

ಡಿಎನ್‌ಎ ಪರೀಕ್ಷೆಯಲ್ಲಿ ಗುರುತು ಪತ್ತೆಯಾದವರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಯು.ಬಿ. ಅಯ್ಯಪ್ಪ (70), ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿಯ ಆದಿಶೇಷ ನಾರಾಯಣ (27) ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ಕೃಷ್ಣಪ್ಪ (85) ಸೇರಿದ್ದಾರೆ. ಮೂವರೂ ಪುರುಷರಾಗಿದ್ದು, ಅವರ ಗುರುತು ಅಧಿಕೃತವಾಗಿ ದೃಢಪಟ್ಟಿದೆ.

ಧರ್ಮಸ್ಥಳದ ಸುತ್ತಮುತ್ತ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳ ನಡುವೆಯೇ ನಡೆದ ಉತ್ಖನನದಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಪೈಕಿ ಡಿಎನ್‌ಎ ಪರೀಕ್ಷೆಯಲ್ಲಿ ಗುರುತಾದ ಮೂವರೂ ಪುರುಷರು ಎಂಬುದು ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ.

ಜುಲೈ 15ರಂದು ಎಸ್‌ಐಟಿ ಸಲ್ಲಿಸಿದ್ದ ವರದಿಯಲ್ಲಿ ಅಸ್ಥಿಪಂಜರಗಳ ಗುರುತು ಪತ್ತೆ ಹಾಗೂ ಡಿಎನ್‌ಎ ಪರೀಕ್ಷೆಯ ವಿವರಗಳನ್ನು ಉಲ್ಲೇಖಿಸಲಾಗಿತ್ತು. ಸಂಬಂಧಿತ ಕುಟುಂಬಸ್ಥರು ಎಸ್‌ಐಟಿಗೆ ಮನವಿ ಸಲ್ಲಿಸಿದರೆ, ನಿಯಮಾನುಸಾರ ಅಸ್ಥಿಪಂಜರಗಳನ್ನು ಅವರಿಗೆ ಹಸ್ತಾಂತರಿಸುವ ಅವಕಾಶವಿದೆ ಎಂದು ತಿಳಿದುಬಂದಿದೆ.

ಕೊಡಗು ಜಿಲ್ಲೆಯ ಯು.ಬಿ. ಅಯ್ಯಪ್ಪ ಅವರು 2017ರ ಜೂನ್ 25ರಂದು ಚಿಕಿತ್ಸೆಗಾಗಿ ಮೈಸೂರಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ತುಮಕೂರು ಜಿಲ್ಲೆಯ ಆದಿಶೇಷ ನಾರಾಯಣ ಅವರು ಬೆಂಗಳೂರಿನ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದು, 2013ರ ಅಕ್ಟೋಬರ್ 2ರಂದು ಮನೆಗೆ ಬಂದು ಮೊಬೈಲ್ ಇಟ್ಟು ಹೊರಹೋದ ಬಳಿಕ ನಾಪತ್ತೆಯಾಗಿದ್ದರು. ಆರಂಭದಲ್ಲಿ ಅವರು ಪದೇಪದೆ ಮನೆ ಬಿಟ್ಟು ಹೋಗುತ್ತಿದ್ದ ಕಾರಣ ಕುಟುಂಬಸ್ಥರು ದೂರು ದಾಖಲಿಸಿರಲಿಲ್ಲ. ಬಳಿಕ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಕೋಲಾರ ಜಿಲ್ಲೆಯ ಕೃಷ್ಣಪ್ಪ ಅವರು 2024ರ ಅಕ್ಟೋಬರ್ 22ರಂದು ಮನೆಯಿಂದ ಹೊರಹೋಗಿ ಮರಳಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಈ ಮೂರು ನಾಪತ್ತೆ ಪ್ರಕರಣಗಳಲ್ಲಿನ ವ್ಯಕ್ತಿಗಳ ಡಿಎನ್‌ಎ ಮಾದರಿಗಳು ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳೊಂದಿಗೆ ಹೊಂದಾಣಿಕೆಯಾಗಿರುವುದು ಎಸ್‌ಐಟಿ ತನಿಖೆಗೆ ಮಹತ್ವದ ಸಾಕ್ಷ್ಯವಾಗಿ ಪರಿಣಮಿಸಿದ್ದು, ಪ್ರಕರಣದ ತನಿಖೆ ಹೊಸ ಹಂತಕ್ಕೆ ಪ್ರವೇಶಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img